ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

Public TV
2 Min Read

– ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ
– ಶಾಲೆಯ ಆವರಣದಲ್ಲಿ ವಿಜ್ಞಾನ ಮಾದರಿ

ಮಡಿಕೇರಿ: ಕೊಡಗಿನ ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಮಕ್ಕಳಿಗೆ ಉಪಯುಕ್ತವಾಗಲೆಂದು ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮಾಡುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ.

ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿನೂತನ ಕಲಿಕೆ ವಿಧಾನವನ್ನು ಬಳಸಲಾಗುತ್ತಿದೆ. ಇಲ್ಲಿನ ಶಿಕ್ಷಕ ಸತೀಶ್ ಅವರು ಟೆಕ್ನಾಲಜಿ ಬಳಸಿ ವಿನೂತನ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಇವರ ಈ ವಿಶೇಷ ಪಾಠದ ಪ್ಲಾನ್‍ನಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಕೂಡ ಸಂಜೆ ಮನೆಯಲ್ಲಿಯೇ ಸಂಜೆ ವೇಳೆ ಪಾಠ ಕೇಳ್ತಿದ್ದಾರೆ. ಶಾಲೆಯ ಪಾಠ ಅರ್ಥವಾಗದ ಮಕ್ಕಳು ಮತ್ತೆ ಪಾಠ ಕೇಳಿ ಕಲಿಯುತ್ತಿದ್ದಾರೆ. ಈ ವಿಭಿನ್ನ ಪ್ರಯೋಗ ಮಕ್ಕಳಿಗೂ, ಪೋಷಕರಿಗೂ ಖುಷಿ ಕೊಟ್ಟಿದೆ.

ಶಾಲೆಯ ಆವರಣದ ಸುತ್ತಲೂ ಸೈನ್ಸ್ ಮಾಡೆಲ್‍ಗಳನ್ನು ನಿರ್ಮಿಸಲಾಗಿದೆ. ಈ ಮಾಡೆಲ್‍ಗಳನ್ನು ನೋಡಿ ಕಲಿತು, ಅದರ ಕೆಲಸದ ಬಗ್ಗೆ ಇಲ್ಲಿನ ಮಕ್ಕಳು ವಿವರಿಸುತ್ತಾರೆ. ಕಾಲೇಜು ಮಟ್ಟದ ಪ್ರಾಕ್ಟಿಕಲ್ ಟೀಚಿಂಗ್ ಕೂಡ ಅಲ್ಲಿದೆ. ಟೆಕ್ನಾಲಜಿಯನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಶಿಕ್ಷಕ ಸತೀಶ್ ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾರೆ.

ಹೇಗೆ ಕಾನ್ಫರೆನ್ಸ್ ಕಾಲ್?
ಸಿಟಿಯ ಹೈಫೈ ಶಾಲೆಗಳಲ್ಲಿ ಮಕ್ಕಳಿಗೆ ವಾಟ್ಸಾಪ್ ಗ್ರೂಪ್ ಮಾಡಿ ಟೀಚ್ ಮಾಡುವಂತಹದ್ದು ಗ್ರಾಮೀಣ ಭಾಗಕ್ಕೆ ಆಗಲ್ಲ, ಅದರ ಬದಲಿಗೆ ಬಂದಿರೋದೆ ಕಾನ್ಫರೆನ್ಸ್ ಕಾಲ್ ಟೀಚಿಂಗ್. ಇದು ತುಂಬಾ ಸಿಂಪಲ್. ಸಂಜೆ ಮಕ್ಕಳು ಮನೆಗೆ ಹೋದ್ಮೇಲೆ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಸಮಯ ಫಿಕ್ಸ್ ಆಗಿರುತ್ತೆ. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದು. ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

ಪ್ರಸ್ತುತ ನಾನು 3, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು, ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಾನ್ಫರೆನ್ಸ್ ಕಾಲ್ ಟೀಚಿಂಗ್ ಬಳಿಕ ಅದನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. ಸತೀಶ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *