ಹಬ್ಬ ಬಿಡಿ, ಬದುಕು ಕಟ್ಟಿಕೊಳ್ಳಲು ನಮ್ಗೆ ಸಹಾಯ ಮಾಡಿ- ಮುಸ್ಲಿಂ ಮಹಿಳೆಯರು ಕಣ್ಣೀರು

Public TV
1 Min Read

ಮಡಿಕೇರಿ: ಇಂದು ಬಕ್ರಿದ್ ಹಬ್ಬ, ಆದರೆ ಸಂಭ್ರಮದಿಂದ ಅದನ್ನು ಆಚರಿಸುವ ಜನರ ಖುಷಿಯನ್ನು ಪ್ರವಾಹ ಕಿತ್ತುಕೊಂಡಿದೆ. ಪ್ರವಾಹದಿಂದ ಮನೆಗಳನ್ನು ತೊರೆದು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮುಸ್ಲಿಂ ಮಹಿಳೆಯರು ಹಬ್ಬವನ್ನು ಮುಂದಿನ ವರ್ಷ ಮಾಡುತ್ತೇವೆ. ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ.

ಕೊಡಗಿನ ನೆಲ್ಯಹುದಿಕೇರಿಯ ನಿರಾಶ್ರಿತ ಕೇಂದ್ರದಲ್ಲಿ ತಂಗಿರುವ ಮುಸ್ಲಿಂ ಮಹಿಳೆಯರು ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂದಿನ ವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೇವೆ. ಸದ್ಯ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ. ಒಂದು ತಿಂಗಳಿಂದ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದೆವು. ಆದರೆ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಕೊಚ್ಚಿಹೋಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಮ್ಮ ಮನೆಗಳು, ಆಸ್ತಿಪಾಸ್ತಿಗಳು ನಾಶವಾಗಿದೆ. ಕೆಲವರು ಎಲ್ಲವನ್ನೂ ಕಳೆದುಕೊಂದು ಸಂಕಷ್ಟದಲ್ಲಿದ್ದಾರೆ. ಸದ್ಯ ನಿರಾಶ್ರಿತ ಕೇಂದ್ರದಲ್ಲಿ ನಮಗೆ ಬಟ್ಟೆ, ಊಟವನ್ನು ಕೊಡುತ್ತಿದ್ದಾರೆ. ಆದರೆ ಪ್ರವಾಹ ತಗ್ಗಿದ ಬಳಿಕ ಇಲ್ಲಿಂದ ಹೊರಹೋದ ನಂತರ ನಮ್ಮ ಮುಂದಿನ ಜೀವನ ಹೇಗೆ ಎಂದು ತಿಳಿದಿಲ್ಲ ಎಂದು ತಮ್ಮ ಪರಿಸ್ತಿತಿ ಬಗ್ಗೆ ಹೇಳಿಕೊಂಡಿದ್ದಾರೆ.

ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ಕೊಡಗಿನ ಬಹುತೇಕ ಪ್ರದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂದು ನಿರಾಶ್ರಿತ ಕೇಂದ್ರಗಳಲ್ಲಿ ನೆರವು ಪಡೆದಿದ್ದಾರೆ. ಹೀಗಾಗಿ ಮುಸ್ಲಿಮರು ಸಂಭ್ರಮದಿಂದ ಆಚರಿಸುವ ಬಕ್ರಿದ್ ಹಬ್ಬವನ್ನು ಮಾಡಲು ಸಾಧ್ಯವಾಗುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *