ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

Public TV
2 Min Read

ಮಡಿಕೇರಿ: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರದ ಮೇಲೆ ನಡೆಯುತ್ತಿರುವ ಶೋಷಣೆ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಪುಟಾಣಿಯೊಬ್ಬಳು ಸಂಸದ ಪ್ರತಾಪ್ ಸಿಂಹ ಅವರಿಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪತ್ರಕ್ಕೆ ಪ್ರತಾಪ್ ಸಿಂಹ ಕೂಡ ಉತ್ತರ ಕೊಟ್ಟಿದ್ದು, ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2005ರ ತನಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇರಲಿಲ್ಲ. ಆದರೂ ಕೊಡಗಿನವರು ಚೆನ್ನಾಗಿಯೇ ಇದ್ದರು. ಆದರೆ ನಂತರ ಬಂದಿರುವ ಯೋಜನೆಗಳು ನಮ್ಮನ್ನು ಕೊಲ್ಲುತ್ತಿವೆ ಎನ್ನುವ ಅರ್ಥದಲ್ಲಿ ಪತ್ರ ಬರೆಯಲಾಗಿದೆ. ನೀವು ಒಬ್ಬ ಮಗಳ ತಂದೆ, ನಾನು ಒಬ್ಬ ತಂದೆಯ ಮಗಳು ಎನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಕೊಡಗಿಗೆ ಬರುವುದರಿಂದ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತದೆಯೇ ಹೊರತು ಇಲ್ಲಿನವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾಳೆ.

ಯಾರ್ಯಾರು? ಯಾವ್ಯಾವ? ರೀತಿಯಲ್ಲಿ ಜಿಲ್ಲೆಗೆ ಮಾರಕವಾಗಲಿದ್ದಾರೆ ಎನ್ನುವುದನ್ನೂ ಬಾಲಕಿ ವಿವರಿಸಿದ್ದಾಳೆ. ಶೇ. 18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಜಿಲ್ಲೆಯ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗುತ್ತಿದೆ. ವಾರ್ಷಿಕ ಸರಾಸರಿ 220 ಇಂಚು ಮಳೆಯಾಗುತ್ತಿದ್ದಲ್ಲಿ ಈಗ 170 ಇಂಚು ಮಳೆಯಾಗುತ್ತಿದೆ. ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿದೆ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದಾಳೆ.

ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಗಳು ಕಂಡುಬರುತ್ತಿದೆ. ಕೊಡಗು ಪ್ಲಾಸ್ಟಿಕ್‍ಮಯ ಆಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾಳೆ. ಜಿಲ್ಲೆಯ ಶೇ. 82ರಷ್ಟು ಮಂದಿ ಪಶ್ಚಿಮಘಟ್ಟದ ಕಾಡು, ಕಾವೇರಿ ನದಿಯನ್ನು ರಕ್ಷಿಸುವ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.

ಬಾಲಕಿಯ ಮನವಿಗೆ ಪ್ರತಾಪ್ ಸಿಂಹ ಹೇಳಿದ್ದೇನು?
ಬಾಲಕಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ನನ್ನ ಪ್ರೀತಿಯ ರಾಜ್‍ಕುಮಾರಿ ನೀನು ಈ ದೇಶದ ಭವಿಷ್ಯ. ಜನಪ್ರತಿನಿಧಿಯಾಗಿ ನಿನ್ನ ಭವಿಷ್ಯವನ್ನು ರಕ್ಷಿಸುವುದು ನನ್ನ ಕರ್ತವ್ಯ. ನಾನು ಈ ಬಗ್ಗೆ ವಿವರಣೆಯನ್ನು ನೀಡುತ್ತೇನೆ. ಆದರೆ ಸದ್ಯ ಸಂಸತ್ ಹಾಗೂ ಕೆಲ ಯೋಜನೆಗಳ ಕೆಲಸದಲ್ಲಿ ಬ್ಯುಸಿ ಇದ್ದೇನೆ. ನನಗೆ ಪ್ರತಿಕ್ರಿಯಿಸಲು ಒಂದೆರೆಡು ದಿನ ಸಮಯ ಕೊಡು. ಫೇಸ್‍ಬುಕ್ ಲೈವ್ ಬಂದು ಉತ್ತರಿಸಲಾ ಅಥವಾ ಬರವಣೆಗೆ ರೂಪದಲ್ಲಿ ಪ್ರತಿಕ್ರಿಯಿಸಲಾ ಎಂದು ಬರೆದು ಬಾಲಕಿ ಪತ್ರ ಹಿಡಿದು ನಿಂತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *