ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

Public TV
3 Min Read

ಬೆಂಗಳೂರು: ಕೊಡಗಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ಎಲ್ಲ ಕಡೆ ಯಾಕೆ ಭೂ ಕುಸಿತವಾಗಿಲ್ಲ ಎಂದು ಹಲವು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ.

ದೇವರಕೊಲ್ಲಿ, ಜೋಡುಪಾಲ, ಮದೆನಾಡು, ಮುಕ್ಕೋಡ್ಲು, ಮಾದಾಪುರ ಗಾಳಿಬೀಡು ಹಮ್ಮಿಯಾಲ, ದೇವಸ್ತೂರು, ಸಂಪಾಜೆಯ ಅರೆಕಲ್ಲು, ಜೇಡ್ಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದ್ದರಿಂದ ಜನ ಈಗ ಈ ಪ್ರಶ್ನೆ ಕೇಳುತ್ತಿದ್ದಾರೆ.

ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಶ್ರೇಣಿಯಲ್ಲಿ ಬಿದ್ದ ಮಳೆಗಿಂತಲೂ ಜಾಸ್ತಿ ಮಳೆ ಪುಷ್ಪಗಿರಿ ಬೆಟ್ಟ, ಕೊಡಗಿನ ಅತಿ ಎತ್ತರ ಬೆಟ್ಟವಾದ ತಡಿಯಂಡಮೋಳು, ಬ್ರಹ್ಮಗಿರಿ ಬೆಟ್ಟ, ತಲಕಾವೇರಿ ಮುಂತಾದ ಬೆಟ್ಟದಲ್ಲಿ ಬಿದ್ದಿದೆ. ಆದರೆ ಇಲ್ಲಿ ಎಲ್ಲೂ ಆಗದ ಕುಸಿತಗಳು ಇಲ್ಲೆ ಯಾಕೆ ಆಗಿದೆ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.

ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಉತ್ತರ ಕಂಡುಕೊಳ್ಳಬೇಕಾದರೆ ಹಲವು ದಿನಗಳು ಬೇಕಾಗಬಹುದು. ಆದರೆ ನಿರಂತರ ಭೂ ಕೊರೆತ, ಭಾರೀ ವಾಹನಗಳ ಓಡಾಟದಿಂದ ಈ ಪ್ರಮಾಣದಲ್ಲಿ ಭೂ ಕುಸಿತವಾಗಿರಬಹುದು ಎನ್ನುವುದು ಸ್ಥಳೀಯರ ಮಾತು.

ಭಾರೀ ಪ್ರಮಾಣದ ಓಡಾಟ ಹೇಗೆ?
ಬೆಂಗಳೂರು – ಮೈಸೂರು – ಮಡಿಕೇರಿಯಿಂದ ಬಂಟ್ವಾಳ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಿಸಲಾಗಿದ್ದು, ಇದರ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು 2014ರಲ್ಲಿ. ಮೈಸೂರಿನಿಂದ- ಕುಶಾಲನಗರ, ಕುಶಾಲನಗರದಿಂದ ಸಂಪಾಜೆ, ಸಂಪಾಜೆಯಿಂದ ಬಂಟ್ವಾಳ ಹೀಗೆ ಮೂರು ಹಂತದಲ್ಲಿ ಈ ಯೋಜನೆಯನ್ನು ಮುಗಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗುವ ಮೊದಲು ಈ ರಸ್ತೆಯಲ್ಲಿ ಕಡಿಮೆ ಪ್ರಮಾಣದ ವಾಹನಗಳು ಓಡಾಡುತಿದ್ದವು. ಯಾವಾಗ ಹೆದ್ದಾರಿ ಕಾಮಗಾರಿಗಳು ಮುಗಿದವೋ ಆಗ ವಾಹನಗಳ ಸಂಖ್ಯೆಯೂ ಹೆಚ್ಚಾಯಿತು. ಈ ಹಿಂದೆ ಅಪಾಯಕಾರಿ ತಿರುವುಗಳಾಗಿದ್ದ ಜಾಗ ಅಗಲವಾಗಿ ನಿರ್ಮಾಣವಾದ ಪರಿಣಾಮ ಘನವಾಹನಗಳ ಓಡಾಟ ಆರಂಭವಾಯಿತು.

ಈ ನಡುವೆ ಶಿರಾಡಿ ಘಾಟ್ ಸಂಚಾರ 6 ತಿಂಗಳು ಬಂದ್ ಆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹಗಳ ಸಂಖ್ಯೆ ಹೆಚ್ಚಾಯಿತು. ಘನವಾಹನಗಳು ಸಂಪಾಜೆ, ಕೊಯನಾಡು, ಜೋಡುಪಾಲ, ಮದೆನಾಡು ಮೂಲಕ ಮಡಿಕೇರಿಗೆ ಆಗಮಿಸಿ ಮೈಸೂರಿಗೆ ತೆರಳಿದ್ದರೆ, ಇನ್ನು ಕೆಲವು ಮಡಿಕೇರಿಯ ಮೂಲಕ ಹಟ್ಟಿಹೊಳೆ, ಮಾದಾಪುರ ಮೂಲಕ ಹಾಸನಕ್ಕೆ ಓಡಾಡಿವೆ. ಭಾರೀ ವಾಹನಗಳ ಓಡಾಟದಿಂದ ಮನೆಗಳು, ಭೂಮಿ ಅಲುಗಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ ಈ ವಿಚಾರಗಳನ್ನು ಯಾರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಘನವಾಹನಗಳ ಸಂಚಾರಕ್ಕೆ ಈ ರಸ್ತೆಯನ್ನು ಬಂದ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಸಂಪಾಜೆ- ಮಡಿಕೇರಿ ರಸ್ತೆ ಮಧ್ಯೆ ಬಾಯಿಬಿಡುವುದು ಅಥವಾ ಕುಸಿತವಾಗುವುದು ಇದೇ ಮೊದಲೆನಲ್ಲ. 2015ರಲ್ಲಿ ಸುರಿದ ಮಳೆಗೆ ಸಂಪಾಜೆಯಿಂದ 1 ಕಿ.ಮೀ ದೂರದಲ್ಲಿರುವ ಕೊಯಿನಾಡು ಬಳಿ ಇರುವ ಸಿಂಕೋನ ಎಸ್ಟೇಟ್ ಸಮೀಪ ರಸ್ತೆ ಬಿರುಕು ಬಿಟ್ಟಿತ್ತು. ಮಳೆ ನೀರು ಹರಿಯಲು ಸರಿಯಾಗಿ ಜಾಗ ಇಲ್ಲ ಕಾರಣ ರಸ್ತೆಯ ಅಡಿಯಲ್ಲೇ ನೀರು ಹೋದ ಪರಿಣಾಮ ಕುಸಿತಗೊಂಡಿತ್ತು. ಈ ಸಮಸ್ಯೆಯಾದ ಬಳಿಕ ದುರಸ್ತಿ ಕಾರ್ಯದ ವೇಳೆ ರಸ್ತೆಯ ಅಡಿ ಭಾಗದಿಂದ ನೀರು ಹೊರಹೋಗಲು ವ್ಯವಸ್ಥೆ ಮಾಡಲಾಗಿತ್ತು. ಈಗ ಕುಸಿತಗೊಂಡ ಭಾಗದಲ್ಲಿ ರಸ್ತೆ ಚೆನ್ನಾಗಿದೆ. ಹೀಗಾಗಿ ಘಾಟಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೇಲಿನಿಂದ ಬಿದ್ದ ನೀರು ರಸ್ತೆಯ ಕೆಳ ಭಾಗದಿಂದ ಹರಿದು ಹೋಗಲು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಹಲವು ಕಡೆ ಕುಸಿತ ಉಂಟಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

(ಕೊಯಿನಾಡಿನ ಬಳಿ 2015ರಲ್ಲಿ ಕುಸಿತಗೊಂಡ ರಸ್ತೆ. ಸಾಮಾಜಿಕ ಜಾಲತಾಣದಲ್ಲಿ ಜನ ಈ ಬಾರಿ ಕುಸಿತಗೊಂಡ ಫೋಟೋದ ಜೊತೆಗೆ ಈ ಫೋಟೋವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ)

ಮೇಲೆ ತಿಳಿಸಿದ ಕಾರಣದ ಜೊತೆ ದಾಖಲೆ ಪ್ರಮಾಣದ ಮಳೆ ಕೊಡಗಿನಲ್ಲಿ ಆಗಿದೆ. ಏಪ್ರಿಲ್ ನಿಂದ ಆರಂಭಗೊಂಡ ಬಳಿ ನಿರಂತರವಾಗಿ ಸರಿಯುತ್ತಲೇ ಇದೆ. ಎಲ್ಲದರ ಪರಿಣಾಮ ಅರಣ್ಯ ನಾಶದಿಂದ ಮೊದಲೇ ಸಡಿಲಗೊಂಡಿದ್ದ ಮಣ್ಣು ಆಗಸ್ಟ್ ಮೂರನೇ ವಾರದಲ್ಲಿ ಬಿದ್ದ ಭಾರೀ ಮಳೆಗೆ ರಸ್ತೆಗೆ ಬಿದ್ದಿದೆ. ನೀರಿನ ರಭಸಕ್ಕೆ ಮರಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *