ಜಲಪ್ರಳಯಕ್ಕೆ ಕುಗ್ಗಿದ್ದ ಕೊಡಗು ರೈತನಿಗೆ ಆಸರೆಯಾಯಿತು ಕೋಳಿ ಸಾಕಾಣಿಕೆ

Public TV
2 Min Read

– ವರ್ಷಪೂರ್ತಿ ಮೊಟ್ಟೆ ಇಡುತ್ತವೆ ನಾಟಿ ಕೋಳಿಗಳು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಅದೆಷ್ಟೋ ಜನರ ಬದುಕು ಕೊಚ್ಚಿಹೋಗಿತ್ತು. ಇತ್ತ ಕಾಫಿ ತೋಟ, ಗದ್ದೆ ಸೇರಿದಂತೆ ಇತರ ಆದಾಯ ಮೂಲಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಮಸ್ಯೆಗಳನ್ನು ಎದುರಿಸಿ ಚೇತರಿಸಿಕೊಳ್ಳಲು ಆತ್ಮವಿಶ್ವಾಸ ಅಗತ್ಯ. ಇದಕ್ಕೆ ಮಾದರಿ ಎನ್ನುವಂತೆ ಜಲಪ್ರಳಯ ಸಂತ್ರಸ್ತ ರೈತರೊಬ್ಬರು ಸ್ವಯಂ ಉದ್ಯೋಗಕ್ಕೆ ಮುಂದಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ರೈತ ತಿಮ್ಮಯ್ಯ ಎಂಬವರು ಎಸ್.ಡಿ 308 ಹೈದರಾಬಾದ್ ತಳಿಯ ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಈ ಕೋಳಿಗಳ ವಿಶೇಷತೆ ಏನೆಂದರೆ ಇವು ವರ್ಷವಿಡಿ ಮೊಟ್ಟೆ ಕೊಡುತ್ತಿದ್ದು, ಅವುಗಳು ನಾಟಿ ಮೊಟ್ಟೆಯಂತೆ ಕಾಣುತ್ತವೆ. ಈ ಕೋಳಿಗಳು 365 ದಿನವು ಮೊಟ್ಟೆ ನೀಡುವುದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ನಾಟಿ ಕೋಳಿಗಳು ತಿಂಗಳಲ್ಲಿ 15ರಿಂದ 20 ಮೊಟ್ಟೆ ಹಾಕುತ್ತವೆ. ಆದರೆ ಎಸ್.ಡಿ 308 ಹೈದರಾಬಾರ್ ತಳಿಯ ಕೋಳಿಗಳು ವರ್ಷಪೂರ್ತಿ ಮೊಟ್ಟೆ ಹಾಕುತ್ತವೆ. ಒಂದು ಮೊಟ್ಟೆಯ ಬೆಲೆ 10 ರೂ. ಆಗಿದ್ದು, ಒಟ್ಟು 72 ಕೋಳಿಗಳನ್ನು ಹೊಂದಿದ್ದೇವೆ. ಈ ಮೂಲಕ ಖರ್ಚು ವೆಚ್ಚ ಕಳೆದು ಒಂದು ತಿಂಗಳಿಗೆ 30 ಸಾವಿರ ರೂ. ಸಂಪಾದನೆ ಮಾಡುತ್ತಿರುವೆ ಎಂದು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಕಾಡುತ್ತಿದ್ದು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಅನೇಕರು ನಿರುದ್ಯೋಗಿಗಳಾಗಿ ಕಾಲ ಕಳೆಯುತ್ತಿದ್ದಾರೆ. ಕಡಿಮೆ ಬಂಡವಾಳದ ಮೂಲಕ ಇಂತಹ ಸ್ವಯಂ ಉದ್ಯೋಗಕ್ಕೆ ಜನ ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿದ್ದು ಮಾಡಬಹುದಾದ ಈ ಉದ್ಯಮಗಳು ತುಂಬಾ ಲಾಭಕಾರಿಯೂ ಹೌದು. ಇದನ್ನು ಯಾರೂ ಬೇಕಾದರೂ ಆರಂಭಿಸಬಹುದು. ಇದಕ್ಕೆ ಪೂರಕವಾಗಿ ಸರ್ಕಾರವು ಸಾಲ ಸೌಲಭ್ಯ ಒದಗಿಸುತ್ತದೆ. ಗೃಹಿಣಿಯರು ಕೂಡ ಈ ಕೋಳಿ ಸಾಕಾಣಿಕೆ ಮಾಡಬಹುದು ಎಂದು ರೈತ ತಿಮ್ಮಯ್ಯ ತಿಳಿಸಿದರು.

ತಿಮ್ಮಯ್ಯ ಅವರ ಕೋಳಿ ಸಾಕಾಣಿಕೆ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡಿದ್ದು, ಅವರ ಮನೆಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಯ ಮಹಿಳೆಯರು ಆಗಮಿಸಿ ಕೋಳಿ ಸಾಕಾಣಿಕೆಯ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *