– ಕೊರೊನಾ ಮುಕ್ತವಾದ ಕೊಡಗು
ಮಡಿಕೇರಿ: ಗ್ರಾಮದ ನಿವಾಸಿಯನ್ನು ಮಾರಣಾಂತಿಕ ಕೊರೊನಾ ವೈರಸ್‍ನಿಂದ ಗುಣಮುಖರಾಗಲು ಶ್ರಮಿಸಿರುವ ಜಿಲ್ಲಾಡಳಿತಕ್ಕೆ ಕೊಂಡಗೇಂರಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಮಾರ್ಚ್ 19ರಂದು ವಿದೇಶದಿಂದ ಬಂದಿದ್ದ ಗ್ರಾಮದ ನಿವಾಸಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ನಂತರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಮುತುವರ್ಜಿಯಿಂದ ಸೋಂಕು ಹರಡದಂತೆ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ವಲಯಗಳೆಂದು ಘೋಷಿಸಿತ್ತು. ಅಲ್ಲದೆ ಗ್ರಾಮಕ್ಕೆ ಸಂಪೂರ್ಣ ನಿಷೇಧಿಸಿ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಸಿತ್ತು.
ಗ್ರಾಮದ ಸೋಂಕಿತನ ಮೇಲೆ ವಿಶೇಷ ಕಾಳಜಿ ವಹಿಸಿ ಆತ ಗುಣಮುಖವಾಗಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇಂದು ಅಧಿಕೃತವಾಗಿ ಚೇತರಿಸಿಕೊಂಡ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯಿಂದ ಗ್ರಾಮಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‍ನಿಂದ ಕೊಡಗು ಜಿಲ್ಲೆ ಸದ್ಯ ಮುಕ್ತವಾಗಿದೆ. ದುಬೈನಿಂದ ಹಿಂದುರುಗಿದ್ದ ವ್ಯಕ್ತಿಗೆ ಪಾಸಿಟಿವ್ ಬರುವ ಮೂಲಕ ಕೊಡಗಿನಲ್ಲೂ ಕೊರೊನಾ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದೀಗ ಅವರು ಸಂಪೂರ್ಣ ಗುಣಮುಖವಾಗಿದ್ದಾರೆ.
ವ್ಯಕ್ತಿಯ ಮನೆಯಿರುವ ಗ್ರಾಮ ಮತ್ತು ಸುತ್ತ 5 ಕಿ.ಮೀ ಕಂಟೈನ್ಮೆಂಟ್ ಹಾಗೂ ಬಫರ್ ಜೋನ್ ಏರಿಯಾ ನಿಯಮವನ್ನು ತೆರವುಗೊಳಿಸುವುದಾಗಿಯೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ. ಡಿಸ್ಚಾಜ್ ಬಳಿಕವೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಈ ಅವಧಿಯಲ್ಲಿ ಆಕಸ್ಮಿಕವಾಗಿ ಮತ್ತೆ ರೋಗ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದ್ದು, ಅವರ ಮೇಲೆ ನಿಗಾವಹಿಸಲಾಗುವುದು ಎಂದಿದ್ದಾರೆ.
ಜಿಲ್ಲೆಯಲ್ಲಿ 386 ಜನರು ಹೋಂ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಜೊತೆಗೆ ತಬ್ಲಿಕ್ ಜಮಾತ್ ಸಂಪರ್ಕದಲ್ಲಿದ್ದ 14 ಜನರ ಥ್ರೋಟ್ ಸ್ವ್ಯಾಬ್ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ ಎಂದಿದ್ದಾರೆ. ಪಾಸಿಟಿವ್ ವರದಿ ಹೊಂದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಡಾ. ಅಜೀಜ್ ಅವರು ಸರ್ಕಾರದ ನಿರ್ದೇಶನದಂತೆ ಚಿಕಿತ್ಸೆ ನೀಡಿದ್ದೇವೆ. ಆ ನಂತರ ಎರಡು ವರದಿ ನೆಗೆಟಿವ್ ಬಂದಿವೆ. ಪಾಸಿಟಿವ್ ವ್ಯಕ್ತಿ ನಮ್ಮೊಂದಿಗೆ ಚೆನ್ನಾಗಿ ನಡೆದುಕೊಂಡ್ರು. ಅವರ ಫ್ಯಾಮಿಲಿ ಸದಸ್ಯರ ವರದಿಯೂ ಕೂಡ ನೆಗೆಟಿವ್ ಬಂದಿದೆ. ಇವರಿಗೆ ಚಿಕಿತ್ಸೆ ನೀಡುವಾಗ ನಾವು ಕೂಡ ಡಿಸ್ಟೆನ್ಸ್ ಮೈನ್ಟೆನ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದೆವು ಎಂದಿದ್ದಾರೆ.