ಲಕ್ಷ-ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ರಾಕ್‌ ಸ್ಟಾರ್‌ ಹೆಸರಿನ ಹೋರಿ ಇನ್ನಿಲ್ಲ!

Public TV
1 Min Read

– ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಅಭಿಮಾನಿಗಳು

ಹಾವೇರಿ: ಜನಪದ‌ ಕ್ರೀಡೆ ಹೋರಿ ಹಬ್ಬದಲ್ಲಿ ಸಿನಿಮಾ ನಟರಂತೆ ಸುತ್ತ ಮುತ್ತ ಹಳ್ಳಿಗಳಲ್ಲಿ ಹೆಸರು ಮಾಡಿದ್ದ ರಾಕ್‌ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ (Kobbari Hori) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

ಹೋರಿ ಹಬ್ಬದ ಇತಿಹಾಸದಲ್ಲಿಯೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ರಾಕ್‌ ಸ್ಟಾರ್ ಹೋರಿಯನ್ನ ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರು ಸಾಕಿದ್ದರು. ರಾಕ್‌ ಸ್ಟಾರ್ ಹೋರಿಗೆ 25 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ರಾಕ್‌ ಸ್ಟಾರ್‌ ಹೋರಿಯನ್ನ ಮೀರಿಸುವ ಯಾವುದೇ ಹೋರಿ ಇರಲಿಲ್ಲ. ಎಲ್ಲೇ ಹೋದರೂ ಇದಕ್ಕೆ ಬಹುಮಾನ ಫಿಕ್ಸ್‌ ಆಗಿರುತ್ತಿತ್ತು. ರಾಕ್‌ ಸ್ಟಾರ್‌ ಹೋರಿ ಹಬ್ಬದಲ್ಲಿ ಭಾಗಹಿಸುತ್ತಿದೆ ಅಂದ್ರೆ ಸಾವಿರಾರು ಅಭಿಮಾನಿಗಳು ಇದರ ಆರ್ಭಟ ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದರು.

ಕಾಲಾನಂತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಕ್‌ಸ್ಟಾರ್‌ ಕಳೆದ ಒಂದು ವರ್ಷದಿಂದ ಯಾವುದೇ ಹಬ್ಬದಲ್ಲಿಯೂ ಪಾಲ್ಗೊಂಡಿರಲಿಲ್ಲ. ಪಶುವೈದ್ಯರಿಂದ ನಿರಂತರವಾಗಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇತ್ತೀಚೆಗೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿ ರಾಕ್‌ ಸ್ಟಾರ್‌ ಹೋರಿಯ 25ನೇ ಹುಟ್ಟುಹಬ್ಬವನ್ನೂ ಆಚರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಾಕ್‌ಸ್ಟಾರ್‌ ಮಿಂಚಿ ಮಾಯವಾಗಿದೆ.

ರಾಕ್‌ ಸ್ಟಾರ್‌ ಗೆದ್ದ ಬಹುಮಾನಗ‌ಳ ಪಟ್ಟಿ ನೋಡಿ:
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ರಾಕ್ ಸ್ಟಾರ್ ಹೋರಿಯನ್ನು, ಜಮೀನು ಉಳುಮೆಗೂ ಬಳಸಿಕೊಳ್ಳಲಾಗುತ್ತಿತ್ತು. ಜೊತೆಗೆ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬೈಕ್, ಚಿನ್ನಾಭರಣವನ್ನು ಗೆದ್ದುಕೊಟ್ಟಿತ್ತು. ನಂತರ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ 10 ಬೈಕ್, ಚಿನ್ನಾಭರಣ ಮತ್ತು 20 ಟ್ರೈಜುರಿ ಸೇರಿದಂತೆ ಕೃಷಿ ಉಪಕರಣಗಳು, ಹತ್ತು ಹಲವು ಬಹುಮಾನಗಳ ಗೆದ್ದುಕೊಟ್ಟಿತ್ತು. ಈ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿತ್ತು.

ರಾಕ್‌ ಸ್ಟಾರ್‌ ಹೋರಿ ಕಳೆಬರವನ್ನ ನಾಗೇಂದ್ರನಮಟ್ಟಿಯಿಂದ ಹಾವೇರಿ ನಗರದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ರಸ್ತೆ ಉದ್ದಕ್ಕೂ ಬಸವಣ್ಣನಿಗೆ ಪೂಜೆ ಹಾಗೂ ಹಾರ ಹಾಕಿ ಜನರು ಹೋರಿಯ ದರ್ಶನ ಪಡೆದರು. ಹೋರಿಯ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಲಾಯಿತು.

Share This Article