ಬೆಳಕಿನ ಹಬ್ಬದಲ್ಲಿ ಕೊಬ್ಬರಿ ಹೋರಿಗಳ ಖದರ್ ಸೂಪರ್

Public TV
1 Min Read

ಹಾವೇರಿ: ದೀಪಾವಳಿ ಮನೆ-ಮನಗಳ ಬೆಳಗುವ ಹಬ್ಬ. ಇಂತಹ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ವಿಶಿಷ್ಠವಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಹಾವೇರಿಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ನಡೆಸುವ ಜಾನಪದ ಸ್ಪರ್ಧೆ ಎನಿಸಿಕೊಂಡ ಕೊಬ್ಬರಿ ಹೋರಿ ಸ್ಪರ್ಧೆಯಂತೂ ಎಲ್ಲರಿಗೂ ಅಚ್ಚುಮೆಚ್ಚು.

ಪ್ರತಿವರ್ಷ ಶ್ರೀವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಹೋರಿ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಪ್ರತಿವರ್ಷ ದೀಪಾವಳಿ ಹಬ್ಬದಿಂದ ಆರಂಭವಾಗುವ ಈ ಸ್ಪರ್ಧೆ ಮುಂದಿನ ಮುಂಗಾರು ಆರಂಭದವರೆಗೆ ಮುಂದುವರಿಯುತ್ತದೆ. ಈ ವಿಶೇಷ ಕೊಬ್ಬರಿ ಹೋರಿ ಸ್ಪರ್ಧೆಯ ಝಲಕ್ ನೋಡಲೆಂದೇ ಸುತ್ತಮುತ್ತಲ ಊರಿನವರು ಹಾವೇರಿಗೆ ಬಂದು ಖುಷಿಪಡುತ್ತಾರೆ.

ರಂಗುರಂಗಿನ ಬಟ್ಟೆ, ಸುಂದರ ಕೊರಳಪಟ್ಟಿ, ಕೆ.ಜಿಗಟ್ಟಲೆ ಕೊಬ್ಬರಿಯ ಹಾರಗಳನ್ನು ಧರಿಸಿ ಶೃಂಗಾರಗೊಂಡ ಎತ್ತುಗಳು, ನಾ ಮುಂದೆ-ತಾ ಮುಂದೆ ಎಂದು ಕೊಬ್ಬರಿ ಹರಿಯಲು ಮುಂದಾದ ಯುವಕರ ದಂಡು ಈ ಸ್ಪರ್ಧೆಯ ಕೇಂದ್ರಬಿಂದುವಾಗಿರುತ್ತದೆ. ಈ ಹೋರಿಗಳು ಮತ್ತು ಯುವಕರ ನಡುವಿನ ರೋಮಾಂಚನಕಾರಿ ಸೆಣಸನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಶ್ರೀವೀರಭದ್ರೇಶ್ವರ ಜಾತ್ರೆಗೆ ಆಗಮಿಸುತ್ತಾರೆ.

ಈ ಬಾರಿ ಕೊಬ್ಬರಿ ಹೋರಿಗಳನ್ನು ಹಿಡಿಯಲು ನೂರಾರು ಯುವಕರು ಭಾರೀ ಕಸರತ್ತನ್ನೇ ನಡೆಸಿದ್ದಾರೆ. ಸಾವಿರಾರು ಜನರ ಮಧ್ಯೆ ಹಾವೇರಿಯ ಕಾ ರಾಜಾ, ರಾಕ್ಷಿಸ್, ಹಾವೇರಿ ಕಿಂಗ್, ಬ್ರಹ್ಮ, ರಾಕ್ ಸ್ಟಾರ್, ಭರ್ಜರಿ, ಅದ್ದೂರಿ ಹೋರಿಗಳು ಅಖಾಡವನ್ನು ದಾಟಿ ಮುನ್ನುಗ್ಗಿ ನೆರೆದವರ ಗಮನ ಸೆಳೆದವು.

ಕೊಬ್ಬರಿ ಹರಿಯುವ ಹಬ್ಬಕ್ಕೆ ಸರ್ಕಾರ ನಿಷೇಧ ಹೇರಿದ್ದರೂ ಅದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ನಡೆಯುವ ಇಂತಹ ಜಾನಪದ ಸ್ಪರ್ಧೆಗಳಿಗೆ ಸರ್ಕಾರ ಅವಕಾಶ ಕೊಡಬೇಕು ಎಂಬುದು ರೈತರು ಮತ್ತು ಹೋರಿ ಮಾಲೀಕರ ಮನವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *