ಮತ್ತೆ ಡಿಸಿಸಿ ಬ್ಯಾಂಕ್ ಗದ್ದುಗೆ ಏರಿದ ಕೆ.ಎನ್.ರಾಜಣ್ಣ

Public TV
2 Min Read

ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆದ ಒಂದೇ ವಾರದಲ್ಲಿಯೇ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಮತ್ತೆ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಜುಲೈ 20ರಂದು ಮೈತ್ರಿ ಸರ್ಕಾರ ಡಿಸಿಸಿ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು. ಸೂಪರ್‍ಸೀಡ್ ನಂತರ ಸರ್ಕಾರದಿಂದ ಒಂದು ವರ್ಷ ಅವಧಿಗಾಗಿ ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೆ.ಎನ್.ರಾಜಣ್ಣ, ಸಹಕಾರ ಸಂಘಗಳ ಅಪರ ನಿಬಂಧಕರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದೇಶದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ನೇತೃತ್ವದ ಆಡಳಿತ ವರ್ಗ ಮತ್ತೆ ಅಧಿಕಾರಕ್ಕೆ ಬರಲಿದೆ.

ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಕೆ.ಎನ್.ರಾಜಣ್ಣ, 2003 ಸೆಪ್ಟೆಂಬರ್ ನಿಂದ 2004 ಮೇವರೆಗೂ ಇದೇ ರೀತಿಯ ಕಾರ್ಯ ನಡೆದಿತ್ತು. ಆದ್ರೆ ನಾನೇ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷನಾಗಿರುತ್ತೇನೆ. ಉಪ ಜಿಲ್ಲಾಧಿಕಾರಿಗಳು ಚಾರ್ಜ್ ಕೊಟ್ಟಿದ್ದು, ಅಧಿಕಾರ ವಹಿಸಿಕೊಂಡಿದ್ದೇನೆ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಬ್ಯಾಂಕ್ ನಡೆಯುತ್ತಿದ್ದು, ಅಲ್ಲಲ್ಲಿ ಸಣ್ಣ ನಿಯಮಗಳ ಉಲ್ಲಂಘನೆ ಆಗಿರುತ್ತದೆ. ಸಂಸ್ಥೆಗೆ ನಷ್ಟ ಮತ್ತು ಹಣಕಾಸಿನ ವಿಷಯದಲ್ಲಿ ಲೋಪಗಳಾದ್ರೆ ಒಪ್ಪಿಕೊಳ್ಳುತ್ತೇವೆ. ಆಡಳಿತಾತ್ಮಕ ವಿಚಾರದಲ್ಲಿ ಸಣ್ಣ ಪ್ರಮಾಣದ ತಪ್ಪುಗಳು ನಡೆದಿರುತ್ತವೆ. ಬ್ಯಾಂಕ್‍ನಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ನಾನು ಹೇಳಲ್ಲ. ಬ್ಯಾಂಕ್ ಬಗ್ಗೆ ಮಾತನಾಡುವವರು ಯಾರು ಬಂಡಾವಳ ಹಾಕಿಲ್ಲ ಮತ್ತು ಸರ್ಕಾರದ ಯಾವುದೇ ಠೇವಣಿಗಳು ಇಲ್ಲ. ಬಡವರು ಹಾಕಿದ ಬಂಡವಾಳ ಮತ್ತು ಸಾಲಗಾರರು ಪ್ರಾಮಾಣಿಕವಾಗಿ ನೀಡುವ ಬಡ್ಡಿಯಿಂದ ಬ್ಯಾಂಕ್ ನಡೆಯುತ್ತಿದೆ ಎಂದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್‍ನಿಂದ ಹೊರ ಬರಬೇಕು ಎಂದು ಹೇಳಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ರಾಜಣ್ಣ ನೀಡಿದ ಹೇಳಿಕೆಗಳು ಕಾರಣ ಎನ್ನುವ ವಿಚಾರ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಪರಮೇಶ್ವರ್ ವಿರುದ್ಧವೂ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರ ಸೂಪರ್ ಸೀಡ್ ಮಾಡಿರಬಹುದಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿತ್ತು.

Share This Article
Leave a Comment

Leave a Reply

Your email address will not be published. Required fields are marked *