ಟೀಂ ಇಂಡಿಯಾದಲ್ಲಿ ಕನ್ನಡಿಗ ರಾಹುಲ್ ನಾಯಕ, ದ್ರಾವಿಡ್ ಕೋಚ್

Public TV
2 Min Read

ಜೋಹನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ಕನ್ನಡಿಗರಾದ ರಾಹುಲ್ ದ್ರಾವಿಡ್ ಕೋಚ್ ಆಗಿ ಮತ್ತು ಕೆ.ಎಲ್ ರಾಹುಲ್ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಗುರು, ಶಿಷ್ಯರು ರಾಷ್ಟ್ರೀಯ ತಂಡದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಕೆ.ಎಲ್ ರಾಹುಲ್ ಕರ್ನಾಟಕದ ತಂಡದಲ್ಲಿ ನಾಯಕರಾಗಿದ್ದ ವೇಳೆ ರಾಹುಲ್ ದ್ರಾವಿಡ್ ಸಾಕಷ್ಟು ಕೋಚ್ ಮಾಡಿದ್ದರು. ಆ ಬಳಿಕ ರಾಹುಲ್ ಟೀಂ ಇಂಡಿಯಾಗೆ ಆಯ್ಕೆ ಆದ ನಂತರ ದ್ರಾವಿಡ್‍ರ ಮಾರ್ಗದರ್ಶನ ಮಿಸ್ ಮಾಡಿಕೊಂಡಿದ್ದರು. ಇದೀಗ ಈ ಜೋಡಿ ಟೀಂ ಇಂಡಿಯಾದಲ್ಲಿ ಒಂದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಖಾಯಂ ನಾಯಕ ವಿರಾಟ್ ಕೊಹ್ಲಿ ಗಾಯಳುವಾಗಿ ಹೊರಗುಳಿದಿದ್ದರಿಂದಾಗಿ ರಾಹುಲ್‍ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಈ ಮೂಲಕ ಇದೀಗ ಟೀಂ ಇಂಡಿಯಾದಲ್ಲಿ ಗುರು ಶಿಷ್ಯರು ನಾಯಕ, ಕೋಚ್ ಆಗಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

‌ಜೋಹನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಟೀಂ ಇಂಡಿಯಾಗೆ ವಿಶೇಷವಾಗಿದ್ದು, ಈ ಮೈದಾನದಲ್ಲಿ ಇಂದಿನ ಪಂದ್ಯ ಸೇರಿ ಭಾರತ ತಂಡ 6 ಬಾರಿ ಸೆಣಸಾಡಿದ್ದು ಆರು ಬಾರಿ ಕೂಡ ಬೇರೆ ಬೇರೆ ನಾಯಕರು ತಂಡವನ್ನು ಮುನ್ನಡೆಸಿದ್ದರು. 1992 ರಲ್ಲಿ ಮೊಹಮ್ಮದ್ ಅಜರುದ್ದೀನ್, 1997 ಸಚಿನ್ ತೆಂಡೂಲ್ಕರ್, 2006 ರಾಹುಲ್ ದ್ರಾವಿಡ್, 2013 ಮಹೇಂದ್ರ ಸಿಂಗ್ ಧೋನಿ, 2018 ವಿರಾಟ್ ಕೊಹ್ಲಿ ಮತ್ತು 2022 ರಲ್ಲಿ ಕೆ.ಎಲ್ ರಾಹುಲ್ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಟೀಂ ಇಂಡಿಯಾ ಈ ಮೈದಾನದಲ್ಲಿ ಒಮ್ಮೆಯೂ ಸೋತಿಲ್ಲ 2 ಬಾರಿ ಜಯ, 3 ಪಂದ್ಯ ಡ್ರಾ ಆಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ

ರಾಹುಲ್ ಟೀಂ ಇಂಡಿಯಾ ಟೆಸ್ಟ್ ತಂಡದ 34ನೇ ನಾಯಕನಾದರೆ ಕರ್ನಾಟಕದ ನಾಲ್ಕನೇ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 1980 ರಲ್ಲಿ ಕರ್ನಾಟಕದವರಾದ ಗುಂಡಪ್ಪ ವಿಶ್ವನಾಥ್, 2003 ರಿಂದ 2007ರ ವರೆಗೆ ರಾಹುಲ್ ದ್ರಾವಿಡ್ ಮತ್ತು 2007 ರಿಂದ 2008ರ ವರೆಗೆ ಅನಿಲ್ ಕುಂಬ್ಳೆ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *