ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

Public TV
3 Min Read

ಬೆಂಗಳೂರು: ಸಾಧಾರಣವಾಗಿ ಕರ್ನಾಟಕದಲ್ಲಿ ನಡೆಯುವ ಯಾವುದೇ ದೊಡ್ಡ ಕಾರ್ಯಕ್ರಮಗಳು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ ದೇಶದ 6 ಕೋಟಿ ಅನ್ನದಾತರ ಖಾತೆಗೆ ಒಟ್ಟು 12 ಸಾವಿರ ಕೋಟಿ ಹಣವನ್ನು ಜಮೆ ಮಾಡಲು ತುಮಕೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತ ಕಲ್ಯಾಣ ಮತ್ತು ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ತುಮಕೂರನ್ನು ಆಯ್ಕೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನವನ್ನು ನರೇಂದ್ರ ಮೋದಿ ಬಯಸಿದ್ದರು. ಹೀಗಾಗಿ ಬೆಂಗಳೂರು ಬದಲು ತುಮಕೂರಿನಲ್ಲಿ ಕಿಸಾನ್ ಸಮ್ಮನ್ ಕಾರ್ಯಕ್ರಮ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುರುವಾರ ತುಮಕೂರಿಗೆ ಮೋದಿ – ಎಷ್ಟು ಗಂಟೆಗೆ ಭೇಟಿ? ಎಲ್ಲಿ ಏನು ಕಾರ್ಯಕ್ರಮ?

ಕಿಸಾನ್ ಸಮ್ಮಾನ್ ಯೋಜನೆಯ ನಾಲ್ಕನೇ ಹಂತದ ಕಾರ್ಯಕ್ರಮಕ್ಕೆ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಸುಮಾರು 60-80 ಸಾವಿರ ರೈತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಬಟನ್ ಒತ್ತಿದ ಬೆನ್ನಲ್ಲೇ, ಏಕಕಾಲದಲ್ಲಿ 6 ಕೋಟಿ ರೈತ ಕುಟುಂಬಗಳಿಗೆ ನೇರ ನಗದು ವರ್ಗಾವಣೆಯಾಗಲಿದೆ.

ಈ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ 32 ರೈತರಿಗೆ ‘ಕೃಷಿ ಕರ್ಮಣ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 16 ಜನ ರೈತ ಮಹಿಳೆಯರು ಹಾಗೂ 16 ಪುರುಷ ರೈತರು ಇರಲಿದ್ದಾರೆ. ಜೊತೆಗೆ ಮೀನು ಸಾಕಾಣಿಕೆದಾರರಿಗೆ ಸೌಲಭ್ಯ ವಿತರಣೆ ಕೂಡ ಮಾಡಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ್ ಜೋಶಿ ಸೇರಿ ಹಲವು ಮುಖಂಡರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 2.10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಲಿರುವ ಪ್ರಧಾನಿ ಮೋದಿ, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ. ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿ ಪೂಜೆ ನೆರವೇರಿಸಲಿದ್ದಾರೆ. ಭೇಟಿ ಸ್ಮರಣಾರ್ಥ ಗದ್ದುಗೆ ಪಕ್ಕದಲ್ಲಿ ಬಿಲ್ವಪತ್ರೆ ಗಿಡ ನೆಡಲಿದ್ದಾರೆ. ಬಳಿಕ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಠದ ವಿದ್ಯಾರ್ಥಿಗಳ ಜೊತೆ ಮಾತನಾಡಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ವಿಕ್ಷಣೆಗೆ ನಗರದ ವಿವಿಧೆಡೆ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗಿದೆ. ರಿಂಗ್ ರೋಡ್, ಶಿರಾ ರಸ್ತೆ ಸೇರಿ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಮೋ ಕಾರ್ಯಕ್ರಮಕ್ಕೆ ಬರುವ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಡೀ ಕಲ್ಪತರು ನಾಡು ನಮೋ ಕಡೆ ಎದಿರುನೋಡ್ತಿದೆ.

ಪ್ರಧಾನಿಯ ಇಂದಿನ ಕಾರ್ಯಕ್ರಮ
ಬೆಳಗ್ಗೆ 10:50 – ದೆಹಲಿ ಏರ್‌ಪೋರ್ಟ್‌ನಲ್ಲಿ ವಿಶೇಷ ವಿಮಾನ ಟೇಕ್-ಆಫ್
ಮಧ್ಯಾಹ್ನ 1:20 – ಯಲಹಂಕ ವಾಯುನೆಲೆಗೆ ಆಗಮನ
ಮಧ್ಯಾಹ್ನ 1:25 – ಎಂಐ-17 ಹೆಲಿಕಾಪ್ಟರ್‌ನಲ್ಲಿ ತುಮಕೂರಿಗೆ ಪ್ರಯಾಣ
ಮಧ್ಯಾಹ್ನ 2:10 – ತುಮಕೂರು ವಿವಿ ಹೆಲಿಪ್ಯಾಡ್‍ನಲ್ಲಿ ಲ್ಯಾಂಡಿಂಗ್
ಮಧ್ಯಾಹ್ನ 2:15 – ಸಿದ್ದಗಂಗಾ ಮಠದತ್ತ ಕಾರ್‌ನಲ್ಲಿ ಪ್ರಯಾಣ

ಮಧ್ಯಾಹ್ನ 2:30 – ಸಿದ್ದಗಂಗಾ ಮಠಕ್ಕೆ ಭೇಟಿ, ಶಿವಕುಮಾರ ಸ್ವಾಮಿಜಿ ಗದ್ದುಗೆಗೆ ಪೂಜೆ, ಸಿದ್ದಲಿಂಗ ಸ್ವಾಮೀಜಿ, ಮಕ್ಕಳ ಜೊತೆ ಮಾತುಕತೆ
ಮಧ್ಯಾಹ್ನ 3:20 – ಸಿದ್ದಗಂಗಾ ಮಠದಿಂದ ನಿರ್ಗಮನ
ಮಧ್ಯಾಹ್ನ 3:30 – ಕಿಸಾನ್ ಸಮ್ಮಾನ್ ಸಮಾವೇಶದಲ್ಲಿ ಭಾಗಿ
ಸಂಜೆ 5:20 – ತುಮಕೂರು ವಿವಿ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಟೇಕ್ ಆಫ್
ಸಂಜೆ 5:55 – ಬೆಂಗಳೂರಿನ ಹೆಚ್‍ಎಎಲ್ ಏರ್‌ಪೋರ್ಟ್‌ಗೆ ಆಗಮನ
ಸಂಜೆ 6:20 – ಡಿಆರ್‌ಡಿಓ ಯುವ ವಿಜ್ಞಾನಿಗಳ ಕಾರ್ಯಕ್ರಮದಲ್ಲಿ ಭಾಗಿ
ಸಂಜೆ 7:20 – ರಾಜಭವನಕ್ಕೆ ಆಗಮನ, ವಿಶ್ರಾಂತಿ

Share This Article
Leave a Comment

Leave a Reply

Your email address will not be published. Required fields are marked *