`ಕೈಲಾಸ’ದಲ್ಲಿ ಕಿಕ್ಕೇರಿಸೋ ಟ್ರಾನ್ಸ್ ಸಾಂಗ್

Public TV
2 Min Read

ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ (Ravi). ಇದೀಗ ಅವರು ಕೈಲಾಸ (Kailas) ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ (Nag Venkat) ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂತಹ ಟ್ರಾನ್ಸ್ ಸಾಂಗ್ ವೊಂದನ್ನು ಬಿಡುಗಡೆಗೊಳಿಸಿದೆ. ದೃಶ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ (Trance Song) ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ.

ಈ ಸಿನಿಮಾದ ಆಂತರ್ಯಕ್ಕನುಗುಣವಾಗಿ ಈ ಟ್ರಾನ್ಸ್ ವೀಡಿಯೋ ಸಾಂಗ್ ಅನ್ನು ನಿರ್ದೇಶಕರು ರೂಪಿಸಿದ್ದಾರಂತೆ. ಮಾದಕ ಜಗತ್ತಿನ ಉನ್ಮತ್ತ ಕ್ಷಣಗಳನ್ನು ಹಿಡಿದಿಟ್ಟಂತೆ ಭಾಸವಾಗುವ ಈ ಹಾಡಿನ ಮಧ್ಯೆ ಪೂರಕವಾದ ಒಂದಷ್ಟು ಸಾಲುಗಳು, ಪಾತ್ರದ ಕಡೆಯಿಂದ ತಗೇಲಿ ಬರುತ್ತದೆ. ಅದಕ್ಕೆ ಲೇಖಕ್ ಎಂ ಸಿದ್ದಾರ್ಥ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್ ಅರುಣ್ ಸಂಗೀತ ಸಂಯೋಜನೆಯೊಂದಿಗೆ ಈ ಟ್ರಾನ್ಸ್ ವೀಡಿಯೋ ಸಾಂಗ್ ಮೂಡಿ ಬಂದಿದೆ. ಇದರ ಮೂಲಕವೇ ನಾಯಕ ರವಿಯ ಪಾತ್ರ ಕೂಡಾ ಪ್ರೇಕ್ಷಕರ ಮುಂದೆ ಸುಳಿದಂತಾಗಿದೆ. ಇದುವರೆಗೂ ಕನ್ನಡ ಸಿನಿಮಾಗಳಲ್ಲಿ ಇಂಥಾ ಟ್ರಾನ್ಸ್ ವೀಡಿಯೋ ಸಾಂಗ್ ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಚಿತ್ರದಲ್ಲಿ ಅದನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆಯಂತೆ.

ಇದು ಕ್ರೈಂ ಕಂ ಕಾಮಿಡಿ ಜಾನರಿಗೊಳಪಡುವ ಚಿತ್ರ. ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ತಯಾರುಗೊಂಡಿರುವ ಇದು ನಾಗ್ ವೆಂಕಟ್ ನಿರ್ದೇಶನದ ಮೊದಲ ಸಿನಿಮಾ. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾಗ್ ವೆಂಕಟ್ ಈಗೊಂದಷ್ಟು ವರ್ಷಗಳ ಹಿಂದೆಯೇ ಪೂರ್ಣಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೂ ಸಾಕಷ್ಟು ಕಿರು ಚಿತ್ರಗಳ ಮೂಲಕ ಪರೀಕ್ಷೆಗೊಡ್ಡಿಕೊಂಡಿದ್ದ ನಾಗ್ ವೆಂಕಟ್, ಕೈಲಾಸ ಕಾಸಿದ್ರೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

 

ತಿಂಗಳೊಪ್ಪತ್ತಿನಲ್ಲಿ ಈ ಸಿನಿಮಾವನ್ನು ತೆರೆಗಾಣಿಸಲು ತಯಾರಿ ನಡೆಯುತ್ತಿದೆ. ಇದೇ ತಿಂಗಳ 24ರಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ತಾರಕಾಸುರ ನಂತರ ರವಿ ಮತ್ತೊಂದು ವಿಶೇಷವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲಿದ್ದಾರಂತೆ. ಈಗ ಬಿಡುಗಡೆಯಾಗಿರೋ ನಶೆ ಹಾಡಿನ ಪ್ರಭೆಯಲ್ಲಿಯೇ, ಪ್ರೇಮಿಗಳ ದಿನದಂದು ಚೆಂದದ್ದೊಂದು ಹಾಡು ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕ್ರೈಂ ಹಾಗೂ ಕಾಮಿಡಿ ಮಿಳಿತವಾಗಿರೋದರಿಂದಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ.

Share This Article