ಅಂಬಿಗಾಗಿ ಸುದೀಪ್ ಕಾಲುಗಳಿಗೆ ಕತ್ತರಿ!

Public TV
2 Min Read

ಬೆಂಗಳೂರು: ಸುದೀಪ್ ಕಾಲುಗಳ ಮೇಲೆ ಅಂಬರೀಶ್ ಕೆಂಗಣ್ಣು ಬಿದ್ದಿದೆ. ಆರಡಿ ಕಟೌಟ್ ನ ಕಾಲುಗಳನ್ನು ಕಂಡು ಅಂಬಿ ಸಡನ್ ಶಾಕ್ ಆಗಿದ್ದಾರೆ. `ಹೀಗಾದ್ರೆ ನಾನು ಹೇಗೆ ಕಿಚ್ಚನ ಜೊತೆ ಸಿನಿಮಾ ಮಾಡೋದು’ ಎಂದು ಆವಾಜ್ ಹಾಕಿದ್ದಾರೆ. ಅದಕ್ಕಾಗಿ ಏಕಾಏಕಿ ಖಡ್ಗ ಹಿಡಿದು ನಿಂತಿದ್ದಾರೆ. ಅವರ ಕಣ್ಣ ಮುಂದೀಗ ಸುದೀಪ್ ಆರಡಿ ಎತ್ತರದ ಕಾಲು ಗರ ಗರ ಸುತ್ತುತ್ತಿವೆ.

ಅಂಬಿ ನಿಂಗೆ ವಯಸ್ಸಾಯ್ತಲ್ಲೊ ಸಿನಿಮಾದಲ್ಲಿ ಅಂಬಿ ಮತ್ತು ಕಿಚ್ಚ ಜೊತೆಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಇದು ತಮಿಳಿನ ಪವರ್ ಪಾಂಡಿ ರಿಮೇಕು. ಅಲ್ಲಿ ರಾಜ್ ಕಿರಣ್ ಮಾಡಿದ ಪಾತ್ರವನ್ನು ಇಲ್ಲಿ ಅಂಬಿ ಮಾಡುತ್ತಿದ್ದಾರೆ. ಆದರೆ ಅದೇ ರಾಜ್ ಕಿರಣ್ ಯೌವ್ವನದ ಪಾತ್ರವನ್ನು ರಜನಿ ಅಳಿಯ ಧನುಶ್ ಮಾಡಿದ್ದರು. ರಾಜ್ ಕಿರಣ್ ಮತ್ತು ಧನುಶ್ ಒಂದೇ ಹೈಟು ಇದ್ದದ್ದರಿಂದ ಯೌವ್ವನ ಮತ್ತು ವಯಸ್ಸಾದ ಪಾತ್ರಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಕನ್ನಡದ ಈ ರಿಮೇಕ್ ಗೆ ಅಡ್ಡಗಾಲು ಹಾಕುತ್ತಿರೋದು ಕಿಚ್ಚನ ಆರಡಿ ಹೈಟು.

ಅಂಬಿಯ ಹೈಟು ಹೆಚ್ಚು ಕಮ್ಮಿ ಐದು ಪ್ಲಸ್ ಅಡಿ ಇದೆ. ಕಿಚ್ಚ ಮೊದಲೇ ಆರಡಿ ಕಟೌಟಿನ ಹೈಟು. ಯಂಗ್ ಅಂಬಿಯಾಗಿ ಕಿಚ್ಚ ನಟಿಸಿದರೂ, ಹೈಟ್ ಮಾತ್ರ ತೊಡರುಗಾಲು ಹಾಕುತ್ತಿದೆ. ಹೀಗಾಗಿ ಅಂಬಿ ಯಂಗ್ ಆಗಿದ್ದಾಗ ಎಷ್ಟು ಹೈಟ್ ಇದ್ದರೊ, ಅದೇ ಹೈಟ್ ನಷ್ಟೇ ಕಿಚ್ಚನ ಹೈಟು ಇರಬೇಕೆಂದು ತಂಡ ನಿರ್ಧರಿಸಿದೆ. ಈಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಆರಡಿ ಕಿಚ್ಚನ ಕಾಲನ್ನು ಐದು ಪ್ಲಸ್ ಅಡಿ ಮಾಡಲಾಗುತ್ತಿದೆ. ಶಾರೂ ಖ್ ಅಭಿನಯದ ಫ್ಯಾನ್ ಸಿನಿಮಾದಲ್ಲೂ `ಯಂಗ್ ಶಾರೂಖ್’ ಪಾತ್ರಕ್ಕೆ ಇದೇ ತಂಡ ಶ್ರಮಿಸಿತ್ತು.

ಬಾಲಿವುಡ್ ನ ಆ ವಿಶೇಷ ಟೆಕ್ನಿಕಲ್ ಟೀಮ್ ಮತ್ತಿತರರು ಸೇರಿ ಕಿಚ್ಚನ ಕಾಲಿಗೆ ಕತ್ತರಿ ಹಾಕಲಿದ್ದಾರೆ. ಅದು ತಂತ್ರಜ್ಞಾನದ ಮೂಲಕ. ಅಷ್ಟೇ ಅಲ್ಲ, ಯಂಗ್ ಅಂಬಿಯ ಮುಖ ಮತ್ತು ಕಣ್ಣು ಕೂಡ ಅದೇ ರೀತಿ ಇರುವಂತೆ ಕಿಚ್ಚನಿಗೆ ಮೇಕಪ್ ಮಾಡಲಿದ್ದಾರೆ. ಒಟ್ಟಿನಲ್ಲಿ ವಯಸ್ಸಿನಲ್ಲಿದ್ದಾಗ, ವಯಸ್ಸಾದ ಮೇಲೆ ಅಂಬಿ, ಅಂಬಿಯಂತೆಯೇ ಕಾಣಬೇಕೆನ್ನುವುದೇ ಇದರ ಉದ್ದೇಶ. ದಶಕಗಳ ಹಿಂದೆ ಕಮಲ್ ಹಾಸನ್ ಮೈಕಲ್ ಮದನ್ ಕಾಮರಾಜನ್ ಸಿನಿಮಾದಲ್ಲಿ ಕುಳ್ಳಾತೀಕುಳ್ಳನಾಗಿ ಬೆರಗು ಮೂಡಿಸಿದ್ದರು. ಈಗ ಕಿಚ್ಚ ಅದೇ ಧಮಾಕ ಮಾಡಲು ಹೊರಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *