ನಾವ್ಯಾರು ಶತ್ರುಗಳಲ್ಲ, ಅವ್ರು ಒಪ್ಪಿ ನನಗೂ ಇಷ್ಟ ಆದ್ರೆ ಒಟ್ಟಿಗೆ ಸಿನಿಮಾ – ದರ್ಶನ್ ಬಗ್ಗೆ ಸುದೀಪ್

Public TV
2 Min Read

ದಾವಣಗೆರೆ: ಕಿಚ್ಚ ಸುದೀಪ್ ತಮ್ಮ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಹಾಗೂ ನಾನು ಒಟ್ಟಾಗಿ ಸಿನಿಮಾ ಮಾಡಬಾರದು ಎಂದೇನಿಲ್ಲ. ಆದರೆ ಸ್ನೇಹಿತರ ನಡವಿನ ವಾತಾವರಣ ಸ್ವಲ್ಪ ಹಾಳಾಗಿದೆ. ಮೊದಲು ಇದನ್ನು ಸರಿಪಡಿಸಬೇಕು. ಆದರೆ ಇಂದು ಅದು ಸೇತುವೆಯಾಗಿ, ಗೋಡೆಯಾಗಿ ಬೆಳೆದು ನಿಂತು ಏನೇನೋ ಆಗುತ್ತಿದೆ. ವಾತಾವರಣ ಸರಿಯಾಗಬೇಕು ಅಂದರೆ, ಅದಕ್ಕೆ ಕಾಲ ಕೂಡಿಬರಬೇಕು ಎಂದು ದಚ್ಚು ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

 

ನಾವು ಯಾರೂ ಶತ್ರುಗಳಲ್ಲ, ನಾವು ಯಾವತ್ತು ಒಳ್ಳೆಯದನ್ನೇ ಬಯಸುತ್ತೇವೆಯೇ ಹೊರತು, ಕೆಟ್ಟದ್ದನಲ್ಲ. ಒಳ್ಳೆಯ ಸಿನಿಮಾ ಬಂದು ಅವರು ಒಪ್ಪಿ ನಾನು ಒಪ್ಪಿದರೆ, ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ. ನಾನು ಹೇಳಿರುವ ಈ ವಿಚಾರಕ್ಕೆ ಒಂದು ಒಳ್ಳೆಯ ಟೈಟಲ್ ಕೊಟ್ಟು ನೀವು ಸರಿ ಮಾಡಿ ಎಂದು ತಿಳಿಸಿದರು.

ಇದಕ್ಕೂ ಮುನ್ನ ದಿ ವಿಲನ್ ಚಿತ್ರದಲ್ಲಿ ಶಿವಣ್ಣರ ಮೇಲೆ ಕೈ ಮಾಡಿರುವ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 36 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಸಿನಿಮಾದ ಕಥೆಯನ್ನು ಕೇಳಿಯೇ ಚಿತ್ರವನ್ನು ಮಾಡಿದ್ದಾರೆ. ಕತೆ ಕೇಳಿ ಸಿನಿಮಾ ಒಪ್ಪಿಕೊಂಡಿದ್ದು, ಅವರೇ ನಿರ್ಧಾರ ತೆಗೆದುಕೊಂಡಿದ್ದರು. ಪ್ರತಿಭಟನೆ ಮಾಡುತ್ತಿರುವ ಶಿವಣ್ಣರ ನಿರ್ಧಾರಕ್ಕೆ ವಿರೋಧ ಮಾಡಿದಂತಾಗುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬನ ಸೇರಿಸುವುದಕ್ಕೆ ಹೋದಾಗ ಮಾಡುವ ತ್ಯಾಗವನ್ನು ಅಲ್ಲಿ ತೋರಿಸಲಾಗಿದೆ ಎಂದು ಅವರು ತಿಳಿಸಿದರು.

ಪಾತ್ರ ಅಂತಾ ಬಂದಾಗ ಅಲ್ಲಿ ಶಿವಣ್ಣ ನನ್ನ ಮೇಲೆ ಕೈ ಮಾಡುವ ಸೀನ್ ಬಂದಿದ್ದರೆ, ಖಂಡಿತ ನಾನು ಹೊಡೆಸಿಕೊಳ್ಳುತ್ತಿದ್ದೆ. ಹಿಂದೆ ಒಂದು ಸಿನಿಮಾದಲ್ಲಿ ಯಾರು ಅಂತಾ ಗೊತ್ತಿಲ್ಲ. ಒಂದು ಸನ್ನಿವೇಶದಲ್ಲಿ ಅವರ ಮಗ ಸಾವನ್ನಪ್ಪಿದ್ದಕ್ಕೆ ನನಗೆ ಹೊಡೆಯುತ್ತಾರೆ. ಅಂದು ನಾನು ಹೊಡೆಸಿಕೊಂಡಿದ್ದೇನೆ. ಕಥೆಗಾಗಿ ಆ ದೃಶ್ಯಗಳನ್ನು ಮಾಡಿರುತ್ತೇವೆ. ಶಿವಣ್ಣರ ಅನುಭವವನ್ನು ನಾವು ಪ್ರಶ್ನಿಸಲು ಹೋಗುವಷ್ಟು ದೊಡ್ಡವನು ನಾನು ಅಲ್ಲ ಅಂತಾ ಹೇಳಿದರು.

ಚಿತ್ರದಲ್ಲಿ ಮಗನನ್ನು ಕರೆದುಕೊಂಡು ಬರುತ್ತೇನೆ ಅಂತಾ ತಾಯಿಗೆ ಮಾತು ಕೊಟ್ಟಿರುತ್ತಾರೆ. ಹಾಗಾಗಿ ನನ್ನ ಮೇಲೆ ಕೈ ಮಾಡಲ್ಲ. ಕೈ ಮಾಡುವ ಮುನ್ನ ನನಗೂ ಶಿವಣ್ಣ ಯಾರು ಅಂತಾ ಗೊತ್ತಿರಲ್ಲ. ತಾಯಿ ಜೊತೆ ಸೇರಿಸಲು ಬಂದ ವ್ಯಕ್ತಿ ಅಂತಾ ಗೊತ್ತಾದ ಕೂಡಲೇ ಎಲ್ಲ ಫೈಟಿಂಗ್ ಸೀನ್ ನಿಂತು ಹೋಗುತ್ತದೆ. ಅಭಿಮಾನಿಗಳನ್ನು ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಲಿ. ಬೇಕಾದ್ರೆ ಶಿವಣ್ಣ ಆ ಸೀನ್ ಕಟ್ ಮಾಡಿಸಲಿ. ನನ್ನದೇನೂ ಅಭ್ಯಂತರವಿಲ್ಲ ಅಂತಾ ಸುದೀಪ್ ಸ್ಪಷ್ಟಪಡಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *