ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸಕಲ ಸಿದ್ಧತೆ – ಗ್ರೀನ್ ಗೇಮ್ಸ್‌ಗೆ ಸಜ್ಜಾದ ಬೆಂಗಳೂರು

Public TV
3 Min Read

ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಏಪ್ರಿಲ್ 1 ರಂದು ಲೋಗೋ, ಥೀಮ್ ಸಾಂಗ್ ಹಾಗೂ ಜೆರ್ಸಿ ಬಿಡುಗಡೆಗೊಳಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಎರಡನೇ ಆವೃತ್ತಿಯನ್ನು ಆಯೋಜಿಸುವುದು ನಮ್ಮ ಕರ್ನಾಟಕಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಏಪ್ರಿಲ್ 24 ರಿಂದ ಮೇ 03 ವರೆಗೂ ನಡೆಯಲಿದ್ದು, ಏಪ್ರಿಲ್ 1 ರಂದು ಕ್ರೀಡಾಕೂಟದ ಲೋಗೋ, ಥೀಮ್ ಸಾಂಗ್, ಜೆರ್ಸಿ, ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಯುವಜನ ಮತ್ತು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರ ಗೃಹ ಇಲಾಖೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ

ಏಪ್ರಿಲ್ 24 ರಂದು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ. ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 10 ದಿನಗಳ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಜುಡೋ, ವಾಲಿಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್, ಕರಾಟೆ, ಮಲ್ಲಕಂಬ ಸೇರಿದಂತೆ 20 ಕ್ರೀಡೆಗಳು ನಡೆಯಲಿದ್ದು, ದೇಶದ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 8 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಜೈನ್ ವಿವಿ ಕ್ಯಾಂಪಸ್, ಕಂಠೀರವ ಕ್ರೀಡಾಂಗಣದಲ್ಲಿ ಗೇಮ್ಸ್‍ಗಳು ನಡೆಯಲಿವೆ. ಈ ಕ್ರೀಡಾಕೂಟವನ್ನು ಅದ್ಧೂರಿಯಾಗಿ ಆಯೋಜಿಸಲು ಆರು ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದು, ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ವಿಶೇಷ ನಿಗಾವಹಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಕನ್ನಡ ಮತ್ತು ಹಿಂದಿಯಲ್ಲಿ ಸರೋಜಿನಿ ನಾಯ್ಡು ಬಯೋಪಿಕ್ : ಭಾರತದ ಕೋಗಿಲೆ ಪಾತ್ರದಲ್ಲಿ ಇಬ್ಬರು ನಟಿಯರು

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಾ ಥೀಮ್ ಸಾಂಗ್‍ನ್ನು ಕನ್ನಡದ ಖ್ಯಾತ ರಾರ್ಪರ್, ಗಾಯಕ ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದಾರೆ. ಕ್ರೀಡೆ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದ್ದು ಈ ಕಾರಣಕ್ಕಾಗಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ಅನ್ನು ಹಸಿರು ಕ್ರೀಡಾಕೂಟ (ಗ್ರೀನ್ ಗೇಮ್ಸ್)ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

MODi

ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರೀತಿಯ ಸಹಕಾರ ನೀಡ್ತಿದ್ದು, ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಮಾರ್ಗದರ್ಶನ ನೀಡುತ್ತಿದ್ದಾರೆ. ಅದರ ಜೊತೆಗೆ ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕೂಡ ಪ್ರತಿನಿತ್ಯ ಮಾಹಿತಿ ಪಡೆಯುತ್ತಿದ್ದು, ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಹಕ್ಕು ಟೆಂಡರ್ ಆಹ್ವಾನ – ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಧನೆ ಕುರಿತ ‘ಕಾರ್ಯಪಥ’ ಪುಸ್ತಕವನ್ನು ಅನುರಾಗ್ ಠಾಕೂರ್ ಬಿಡುಗಡೆಗೊಳಿಸಲಿದ್ದಾರೆ. ಇದೇ ದಿನ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೊಸ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌ ಉದ್ಘಾಟನೆಗೊಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜೈನ್ ವಿವಿ ವೈಸ್ ಚಾನ್ಸಲರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *