17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ನೆನಪಿನಲ್ಲಿ ಉಳಿಯೋದು ಇಬ್ಬರೇ- ‘ಕೆಜಿಎಫ್’ ಟೀಸರ್‍ನಿಂದ ‘ರಾಮಾಚಾರಿ’ ಮತ್ತೆ ಕಿಂಗ್!

Public TV
2 Min Read

ಬೆಂಗಳೂರು: ಕಳೆದ ಒಂದು ವರ್ಷದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಉಡುಗೊರೆ ಭರ್ಜರಿಯಾಗಿ ಸಿಕ್ಕಿದೆ. ಒಂದು ಕಡೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮವಾದರೆ, ಇನ್ನೊಂದು ಕಡೆ ಕೆಜಿಎಫ್ ಟೀಸರ್ ಬಿಡುಗಡೆಯಾಗಿದೆ. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ನೋಡಬಹದು.

ಯಶ್ ವ್ರತ್ತಿ ಬದುಕಿನಲ್ಲಿ ಕೆಜಿಎಫ್ ಇನ್ನೊಂದು ಮೈಲುಗಲ್ಲಾಗುವುದಲ್ಲಿ ಅನುಮಾನವೇ ಇಲ್ಲ. ಟೀಸರ್‍ನ ಪ್ರತಿ ದೃಶ್ಯ ಇದಕ್ಕೆ ಸಾಕ್ಷಿಯಾಗುತ್ತದೆ. ಸಂಗೀತ, ಕ್ಯಾಮೆರಾ ಕೆಲಸ, ಅದ್ಧೂರಿ ಸೆಟ್, ಲೋಕೇಶನ್ ಹೀಗೆ ಪ್ರತಿಯೊಂದನ್ನು ಅಳೆದು ತೂಗಿ ಎಲ್ಲಾ ಪಕ್ಕಾ ಮಾಡಿಕೊಂಡೇ ನಿರ್ದೇಶಕ ಪ್ರಶಾಂತ್ ನೀಲ್ ಅಖಾಡಕ್ಕೆ ಇಳಿದಿದ್ದಾರೆ. ಇಲ್ಲಿವೆರೆಗೆ ಯಶ್ ಮಾಡದ ಪಾತ್ರವನ್ನು ಕೊಟ್ಟು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಬರೀ ಯಶ್ ಸಿನಿ ಜರ್ನಿಗೆ ಮಾತ್ರ ಅಲ್ಲ, ಕನ್ನಡ ಚಿತ್ರರಂಗದಲ್ಲಿಯೇ ಇದು ನಯಾ ಯುಗ ಆರಂಭಿಸಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

ಯಶ್ ಇಂದು 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆರಾಧ್ಯದೈವದ ಹುಟ್ಟುಹಬ್ಬವನ್ನು ಆಚರಿಸಲು ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಮುಂದೆ ಜಮಾಯಿಸಿದ್ದರು. ದಾರಿ ಉದ್ದಕ್ಕೂ ಯಶ್‍ಗೆ ಶುಭಾಶಯ ಕೋರುವ ಕಟೌಟ್‍ಗಳು ರಾರಾಜಿಸುತ್ತಿವೆ. ಯಶ್ ಮನೆ ಸಂಪೂರ್ಣವಾಗಿ ಕಲರ್ ಕಲರ್ ಲೈಟ್‍ಗಳಿಂದ ಜಗಮಗಿಸುತ್ತಿದೆ. ಪೊಲೀಸ್ ಬಂದೋಬಸ್ತ್‍ನಲ್ಲಿ ಅಭಿಮಾನಿಗಳು ಯಶ್ ಕೈ ಕುಲುಕಿ ಸಂಭ್ರಮಪಟ್ಟಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ.

ಇದೇ ಸಮಯದಲ್ಲಿ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಕೆಜಿಎಫ್ ಟೀಸರ್ ರಿಲೀಸ್ ಮಾಡಲಾಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈ ಸಿನಿಮಾದ ಎರಡು ಭಾಗ ಮೂರು ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ದೊಡ್ಡ ಕ್ಯಾನ್ವಾಸ್‍ನ ಕಥೆ ಬೇರೆ ಇದೆ. ಈ ಸಿನಿಮಾಕ್ಕೆ ಚಿನ್ನದ ಗಣಿ ಸೆಟ್ ಕೂಡ ಹಾಕಲಾಗಿದೆ. ಇದೆಲ್ಲಾ ಸೇರಿಕೊಂಡು ಇಷ್ಟು ತಡವಾಗಿದೆ. ಇನ್ನೇನು ಕೆಲವು ತಿಂಗಳಲ್ಲಿ ಕೆಜಿಎಫ್ ನಿಮ್ಮ ಮುಂದೆ ಹಾಜರಾಗಲಿದೆ.

ರಾಕಿಂಗ್ ಸ್ಟಾರ್ ಯಶ್ ಇಂದು ಕೇವಲ ನಟನಾಗಿ ಮಾತ್ರ ಹೆಸರು ಮಾಡಿಲ್ಲ. ಯಶೋಮಾರ್ಗದ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಅದರಿಂದ ಸಾವಿರಾರು ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದರಲ್ಲೂ ರೈತರಿಗೆ ನೀರು ಕೊಡಿಸುವ ಪ್ರಯತ್ನಕ್ಕೆ ಹೊರಟಿದ್ದಾರೆ. ಇಂತಹ ಕನ್ನಡದ ಹುಡುಗ ಸದಾ ಇದೇ ರೀತಿ ಸಿನಿಮಾಗಳನ್ನು ಮಾಡುತ್ತಾ, ಜನರನ್ನು ರಂಜಿಸಲಿ ಎಂಬದು ಪಬ್ಲಿಕ್ ಟಿವಿಯ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *