ಕೆಜಿಎಫ್ ಡಿಸೆಂಬರ್ 21ಕ್ಕೆ ರಿಲೀಸ್: ಬಿಡುಗಡೆ ತಡವಾಗೋದಕ್ಕೆ ಕಾರಣ ಕೊಟ್ಟ ಚಿತ್ರತಂಡ

Public TV
2 Min Read

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಒಂದು ತಿಂಗಳು ಮುಂದಕ್ಕೆ ಹೋಗಿದ್ದು, ನವೆಂಬರ್ 16 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.

ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ಪ್ರಶಾಂತ್ ನೀಲ್, ಡಿಸೆಂಬರ್ ತಿಂಗಳು ಯಶ್ ಅವರಿಗೆ ಲಕ್ಕಿ ತಿಂಗಳಾದ್ದರಿಂದ ಕೆಜಿಎಫ್ ಆ ತಿಂಗಳಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾತ್ರವಲ್ಲದೇ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಪಂಚ ಭಾಷೆಯಲ್ಲಿ ತೆರೆಕಾಣುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸಿದ್ದು, ನಾವು ಅಂದುಕೊಂಡದಕ್ಕಿಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ ಎಂದರು. ಕನ್ನಡ, ತೆಲುಗು, ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮುಗಿದಿದ್ದು, ಸದ್ಯ ಹಿಂದಿ ಡಬ್ಬಿಂಗ್ ನಡೆಯುತ್ತಿದೆ ಎಂದು ತಿಳಿಸಿದರು.

ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದರು.

ಚಿತ್ರದ ಕಥೆಯ ಬಗ್ಗೆ ವಿವರಿಸಿದ ನಟ ಯಶ್ ಅವರು, ಕೆಜಿಎಫ್ ಕಥೆ ಯೂನಿವರ್ಸಲ್ ಕಾನ್ಸೆಪ್ಟ್ ಆಗಿದ್ದು, ತಾಯಿ-ಮಗನ ಸೆಂಟಿಮೆಂಟ್ ಇಲ್ಲಿದೆ. ಸಿನಿಮಾದಲ್ಲಿ ಬಹುತೇಕ ಕಲಾವಿದರೆಲ್ಲರೂ ಹೊಸಬರೇ ಆಗಿದ್ದು, ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಇಲ್ಲಿ ನಾನು ಮಾತ್ರ ಹೈಲೆಟ್ ಆಗಿಲ್ಲ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ ಎಂದು ಹೇಳಿದರು.

ಅಮಿತಾಬ್ ಬಚ್ಚನ್ ಸಿನಿಮಾ ನೋಡಿಕೊಂಡು ಬೆಳೆದ ನನಗೆ, 80 ರ ದಶಕದ ಸ್ಟೈಲ್‍ನಲ್ಲಿ ಸಿನಿಮಾಗಳನ್ನ ಮಾಡಬೇಕು ಅನ್ನೋ ಆಸೆ ಇತ್ತು. ಆ ಮಹಾಬಯಕೆ ಕೆಜಿಎಫ್ ಮೂಲಕ ನೆರವೇರಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *