ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ ಮಂಗನಕಾಯಿಲೆ ಪತ್ತೆ

3 Min Read

ಕಾರವಾರ: ಉತ್ತರ ಕನ್ನಡ (Uttara Kannda) ಜಿಲ್ಲೆಯಲ್ಲಿ ಈ ವರ್ಷದ ಮೊದಲ ಮಂಗನಕಾಯಿಲೆ (KFD) ಪ್ರಕರಣ ಪತ್ತೆಯಾಗಿದೆ.

ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಹೋಬಳಿಯ ಮುಳಗುಂದ ಗ್ರಾಮದಲ್ಲಿ ಈ ವರ್ಷದ ಮೊದಲ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – KFD) ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಮುಳಗುಂದ ಗ್ರಾಮದ 80 ವರ್ಷದ ವೃದ್ಧೆಯಲ್ಲಿ ಮಂಗನಕಾಯಿಲೆ ಸೋಂಕು ದೃಢಪಟ್ಟಿದ್ದು, ಪ್ರಸ್ತುತ ವೃದ್ಧೆಯ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಂಕಿತ ವೃದ್ಧೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಇದನ್ನೂ ಓದಿ: ರಾಜಶೇಖರ್ ಸಾವು ಆಕಸ್ಮಿಕ ಅಲ್ಲ, ಉದ್ದೇಶಪೂರ್ವಕ ಕೊಲೆ: ಜನಾರ್ದನ ರೆಡ್ಡಿ

ಸಿದ್ದಾಪುರ ತಾಲೂಕು ಈ ಹಿಂದೆ ಮಂಗನಕಾಯಿಲೆಯ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಪ್ರದೇಶವಾಗಿದ್ದು, ಕಳೆದ ಎರಡು ವರ್ಷಗಳಿಂದ ಕೆ.ಎಫ್.ಡಿ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದವು. ಆದರೆ, ಈ ವರ್ಷ ಜನವರಿ ತಿಂಗಳಲ್ಲೇ ಮೊದಲ ಪ್ರಕರಣ ವರದಿಯಾಗಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಪ್ರಕರಣ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದ್ದು, ಸೋಂಕು ಪತ್ತೆಯಾದ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಳಗುಂದ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಆರಂಭವಾಗಿದ್ದು, ಅರಣ್ಯ ಪ್ರದೇಶಕ್ಕೆ ತೆರಳುವವರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮತ್ತೆ ಮಂಗನಕಾಯಿಲೆಯ ಆತಂಕ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಉತ್ತರ ಕನ್ನಡ ಸೇರಿದಂತೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – KFD) ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ಕುರಿತು ತಿಳುವಳಿಕೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಅತ್ಯಂತ ಅಗತ್ಯವಾಗಿದೆ. ಮಂಗನ ಕಾಯಿಲೆ ಒಂದು ವೈರಸ್ ಸೋಂಕು ಆಗಿದ್ದು, ಸೋಂಕಿತ ಉಣಗು (ಟಿಕ್) ಕಚ್ಚುವುದರಿಂದ ಮನುಷ್ಯರಿಗೆ ಹರಡುತ್ತದೆ. ಈ ಕಾಯಿಲೆಗೆ ಮಂಗಗಳು ಹೆಚ್ಚು ತುತ್ತಾಗುವುದರಿಂದ ಇದನ್ನು ಸಾಮಾನ್ಯವಾಗಿ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಜನವರಿಯಿಂದ ಮೇ ತಿಂಗಳವರೆಗೆ ಈ ಕಾಯಿಲೆಯ ಅಪಾಯ ಹೆಚ್ಚು ಕಂಡುಬರುತ್ತದೆ. ಇತ್ತೀಚೆಗೆ ಮಂಗನ ಕಾಯಿಲೆಯಿಂದ ಹೆಚ್ಚು ಸಾವಾಗಿದೆ. ಇದಕ್ಕೆ ಈವರೆಗೂ ಚುಚ್ಚುಮದ್ದು ಕಂಡುಹಿಡಿದಿಲ್ಲ. ಹೀಗಾಗಿ ಅಪಾಯಕಾರಿ ರೋಗದ ಪಟ್ಟಿಯಲ್ಲಿ ಇದು ಕೂಡ ಸ್ಥಾನ ಪಡೆದಿದೆ.

ಲಕ್ಷಣಗಳು:
ಮಂಗನ ಕಾಯಿಲೆ ಸೋಂಕಾದ ವ್ಯಕ್ತಿಯಲ್ಲಿ ತೀವ್ರ ಜ್ವರ, ತಲೆನೋವು, ದೇಹನೋವು, ದಣಿವು, ವಾಂತಿ, ಅಜೀರ್ಣ ಸೇರಿದಂತೆ ಕೆಲ ಸಂದರ್ಭಗಳಲ್ಲಿ ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಗಂಭೀರ ಸ್ಥಿತಿಯಲ್ಲಿ ನರಮಂಡಲದ ಸಮಸ್ಯೆಗಳೂ ಉಂಟಾಗುವ ಸಾಧ್ಯತೆ ಇದೆ. ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಇದನ್ನೂ ಓದಿ: PUBLiC TV Impact | ಕೋಗಿಲು ಲೇಔಟ್ ಮನೆ ತೆರವು ಪ್ರಕರಣ – ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ FIR

ಮುನ್ನೆಚ್ಚರಿಕಾ ಕ್ರಮಗಳು:
* ಅರಣ್ಯ ಪ್ರದೇಶ, ಅಡಿಕೆ ಹಾಗೂ ಕಾಫಿ ತೋಟಗಳಿಗೆ ತೆರಳುವವರು ಪೂರ್ಣ ತೋಳಿನ ಬಟ್ಟೆ, ಪ್ಯಾಂಟ್ ಹಾಗೂ ಬೂಟು ಧರಿಸಬೇಕು.
* ಚರ್ಮಕ್ಕೆ ಉಣಗು (ಟಿಕ್) ಕಚ್ಚದಂತೆ ರಿಪೆಲೆಂಟ್ ಲೋಷನ್ ಬಳಸಬೇಕು.
* ಕಾಡು ಅಥವಾ ತೋಟದಲ್ಲಿ ಕೆಲಸ ಮಾಡಿದ ಬಳಿಕ ದೇಹವನ್ನು ಪರಿಶೀಲಿಸಬೇಕು.
* ಸತ್ತ ಮಂಗಗಳು ಕಂಡುಬಂದಲ್ಲಿ ಅವುಗಳನ್ನು ಮುಟ್ಟದೇ ತಕ್ಷಣ ಅರಣ್ಯ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
* ಕಾಡು ಪ್ರದೇಶದಲ್ಲಿ ಅನಾವಶ್ಯಕ ಸಂಚಾರ ತಪ್ಪಿಸಬೇಕು.

Share This Article