ಅಂಬಿ ಉಪಸ್ಥಿತಿಯಲ್ಲಿ ನಾಳೆ ಅರ್ಜುನ್ ಸರ್ಜಾ-ಶೃತಿ ನಡುವೆ ಸಂಧಾನ ಸಭೆ

Public TV
1 Min Read

ಬೆಂಗಳೂರು: ಮೀಟೂ ಆರೋಪ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ಅವರ ನಡುವೆ ನಾಳೆ ಸಂಧಾನ ಸಭೆ ನಡೆಯಲಿದ್ದು, ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಫಿಲ್ಮ್ ಚೇಂಬರ್ ಕಾರ್ಯಾಧ್ಯಕ್ಷ ಭಾ.ಮಾ ಹರೀಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಅವರು ಸದ್ಯ ಹೊರ ರಾಜ್ಯದಲ್ಲಿದ್ದು, ಅವರು ಆಗಮಿಸಿದ ಬಳಿಕ ಸಂಧಾನ ಸಭೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇಂದು ನಡೆದ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರ ಚರ್ಚೆಯ ಬಳಿಕ ಸಭೆ ಮುಂದುಡಿದ್ದಾರೆ. ಇದರಂತೆ ನಾಳೆ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಹಿರಿಯ ನಟಿಯರಾದ ಬಿ.ಸರೋಜಾದೇವಿ, ಜಯಂತಿ, ಪ್ರೇಮಾ ಹಾಗೂ ನಿರ್ದೇಶಕರ ಸಂಘದ ಸದಸ್ಯರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಶೃತಿ ಅವರು ಮೀಟೂ ಆರೋಪ ಮಾಡಿದ ಬಳಿಕ ದೂರು ದಾಖಲಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ದೂರು ದಾಖಲು ಮಾಡಿಲ್ಲ. ಈ ನಡುವೆ ಸಂಧಾನ ಸಭೆಯಲ್ಲಿ ಅರ್ಜುನ್ ಸರ್ಜಾ, ಶೃತಿ ಹರಿಹರನ್ ಭಾಗವಹಿಸಲಿದ್ದು, ಹಿರಿಯರ ನಿರ್ದೇಶನದ ಬಳಿಕ ಯಾವ ನಿರ್ಧಾರ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಅರ್ಜುನ್ ಸರ್ಜಾ ಅವರು ಕೂಡ ಶೃತಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಕುರಿತು ಹೇಳಿಕೆ ನೀಡಿದ್ದಾರೆ.

ಮೀಟೂ ಆರೋಪ ಬಳಿಕ ಚಿತ್ರರಂಗದ ಹಲವು ಗಣ್ಯರು ಹಾಗೂ ನಟ, ನಟಿಯರು ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. ಮೀಟೂ ಅಂದೋಲನವನ್ನು ದೂರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಲವರು ಆರೋಪ ಮಾಡಿದ್ದರೆ. ಮತ್ತು ಕೆಲವರು ಶೃತಿ ಪರ ನಿಂತು ಬ್ಯಾಟ್ ಬೀಸಿದ್ದರು. ನಾಳೆ ನಡೆಯಲಿರುವ ಸಭೆ ಈ ಎಲ್ಲಾ ಆರೋಪ ಪ್ರತ್ಯಾರೋಪಕ್ಕೆ ಅಂತ್ಯ ಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದಿದ್ದರೂ ಹಿರಿಯ ನಟರ ಸಲಹೆಯನ್ನು ಆಲಿಸಲು ಖಂಡಿತ ಇಬ್ಬರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *