ಫೈನಲ್ ಪ್ರವೇಶಿಸಲಿರುವ 2 ತಂಡಗಳ ಬಗ್ಗೆ ಪೀಟರ್ಸನ್ ಭವಿಷ್ಯ

Public TV
2 Min Read

ಲಂಡನ್: 2019ರ ವಿಶ್ವಕಪ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಮುಗಿದಿದ್ದು, ಇಂಗ್ಲೆಂಡ್‍ನ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಫೈನಲ್‍ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಂಗಳವಾರ ನಡೆಯಲಿರಿವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೆಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿ ಆಗಲಿವೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್‍ನಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಸೆಣಸಲಿವೆ.

https://twitter.com/KP24/status/1147602245942435840

ಈಗ ಸೆಮಿಫೈನಲ್ ಹಂತದಲ್ಲೇ ಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ಪೀಟರ್ಸನ್, ನಾವು ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುತ್ತೇವೆ. ಭಾನುವಾರ ಭಾರತ ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಭಾರತ ರವೀಂದ್ರ ಜಡೇಜಾ ಅವರನ್ನು ಸೆಮಿಫೈನಲ್‍ನಲ್ಲಿ ಆಡಬೇಕು. ಕುಲದೀಪ್ ಯಾದವ್ ಅವರ ಬದಲು ಮೊಹಮ್ಮದ್ ಶಮಿ ಆಡಬೇಕು ಮತ್ತು ದಿನೇಶ್ ಕಾರ್ತಿಕ್ ಬದಲು ಜಡೇಜಾ ಅವರನ್ನು ಆಡಿಸಬೇಕು ಎಂದಿದ್ದಾರೆ. ಆದರೂ ಇಂಗ್ಲೆಂಡ್‍ಗೆ ಈ ಪಂದ್ಯ ಸುಲಭವಾಗಿರಲಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

https://twitter.com/KP24/status/1147464976828964864

ವಿಶ್ವಕಪ್ ಟೂರ್ನಿಯಲ್ಲಿ ಕೇವಿನ್ ಪೀಟರ್ಸನ್ ಭವಿಷ್ಯ ಹೇಳುತ್ತಿರುವುದು ಇದೇ ಮೊದಲೇನಲ್ಲ. ವಿಶ್ವಕಪ್‍ನಲ್ಲಿ ಭಾರತ ಎಲ್ಲ ಪಂದ್ಯಗಳನ್ನು ಗೆಲ್ಲುತ್ತಿದ್ದಾಗ ಲೀಗ್ ಹಂತದಲ್ಲಿ ಭಾರತವನ್ನು ಸೋಲಿಸಿದ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದರು. ನಂತರ ಇಂಗ್ಲೆಂಡ್ ಭಾರತವನ್ನು ಸೋಲಿಸಿತ್ತು.

ಭಾರತ ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು ಒಂದರಲ್ಲಿ ಸೋತು 15 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿದೆ. 11 ಅಂಕಗಳಿಸಿರುವ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಲೀಗ್ ಹಂತದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯ ಕಾರಣ ಒಂದು ಎಸೆತ ಕಾಣದೇ ರದ್ದಾಗಿತ್ತು. ಲೀಗ್ ಹಂತದಲ್ಲಿ ಒಂದು ಬಾರಿಯೂ ಮುಖಾಮುಖಿಯಾಗದ ತಂಡಗಳು ನಾಳೆ ಸೆಮಿಫೈನಲ್‍ನಲ್ಲಿ ಸೆಣಸಲಿವೆ.

ಈ ಪಂದ್ಯದಲ್ಲಿ 11 ವರ್ಷದ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮುಖಾಮುಖಿಯಾಗಲಿದ್ದಾರೆ. 2008ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಈ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಭಾರತ ಭರ್ಜರಿ ಜಯಸಾಧಿಸಿತ್ತು. ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೆ ಈ ಇಬ್ಬರು ನಾಯಕರು ತಂಡದ ಜವಾಬ್ದಾರಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *