– ಬೆಳ್ಳಗಿದ್ದಾಳೆಂದು ತಲೆಗೂದಲು ಕತ್ತರಿಸಿ ಕಪ್ಪಗಿದ್ದ ಪತಿ ಮನೆಯವರಿಂದ ಚಿತ್ರಹಿಂಸೆ
ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಮಗುವಿನೊಂದಿಗೆ ಕೇರಳದ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.
32 ವರ್ಷದ ಕೇರಳ ಮಹಿಳೆಯ ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಮೂಲದ ಸಂತ್ರಸ್ತೆ ವಿಪಂಚಿಕಾ ಮಣಿಯನ್ ಜುಲೈ 8 ರಂದು ತನ್ನ ಶಾರ್ಜಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆಕೆಯ ಒಂದು ವರ್ಷದ ಮಗಳು ಕೂಡ ಸಾವನ್ನಪ್ಪಿದ್ದಾಳೆ. ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ವಿಧಿವಿಜ್ಞಾನ ವರದಿಯಿಂದ ಬಹಿರಂಗವಾಗಿದೆ. ಮೃತ ಮಹಿಳೆ ಬರೆದಿದ್ದಾರೆ ಎನ್ನಲಾದ ಮಲಯಾಳಂ ಭಾಷೆಯ ಕೈಬರಹದ ಪತ್ರವೊಂದು ಮನೆಯಲ್ಲಿ ಸಿಕ್ಕಿದೆ. ಮನೆಯಲ್ಲಿ ದೌರ್ಜನ್ಯ, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.
ಪತಿ ನಿಧೀಶ್ ವಲಿಯವೀಟ್ಟಿಲ್ ಮತ್ತು ಅವರ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮಗಳಿಗೆ ಆಕೆಯ ಪತಿ ಮತ್ತು ಅತ್ತೆ-ಮಾವ ಎಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆಯ ತಾಯಿ ಶ್ಯಾಮಲಾ ಆರೋಪಿಸಿದ್ದಾರೆ.
ಮಣಿಯನ್ ಮತ್ತು ವಲಿಯವೀಟ್ಟಿಲ್ 2020 ರಲ್ಲಿ ವಿವಾಹವಾದರು. ಸಂತ್ರಸ್ತೆಯ ಪತಿ ಮತ್ತು ಆಕೆಯ ಕುಟುಂಬದವರು ಕಪ್ಪು ವರ್ಣೀಯರಾಗಿದ್ದರು. ಬೆಳ್ಳಗಿದ್ದ ಆಕೆಯನ್ನು ಆಕರ್ಷಕವಾಗಿ ಕಾಣಬಾರದೆಂದು ತಲೆಗೂದಲನ್ನು ಕತ್ತರಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.