ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್

Public TV
1 Min Read

-8ನೇ ಸ್ಥಾನದಲ್ಲಿ ಕರ್ನಾಟಕ

ನವದೆಹಲಿ: ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.

ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ.

23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India” ಎಂಬ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ಈ ವರದಿಯ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಹೇಳಿದೆ.

ಕೇರಳದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಆರೋಗ್ಯ ಮಟ್ಟವನ್ನು ಕಾಪಾಡಿಕೊಂಡು ಬಂದಿವೆ. ಇವುಗಳನ್ನು ಬಿಟ್ಟರೆ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಆಗಿದೆ. ಆದರೆ ಛತ್ತೀಸ್‍ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.

2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಮೊದಲ ಹತ್ತು ಆರೋಗ್ಯಕರ ರಾಜ್ಯಗಳು
1. ಕೇರಳ
2. ಆಂಧ್ರ ಪ್ರದೇಶ
3. ಮಹಾರಾಷ್ಟ್ರ
4. ಗುಜರಾತ್
5. ಪಂಜಾಬ್
6. ಹಿಮಾಚಲ ಪ್ರದೇಶ
7. ಜಮ್ಮು -ಕಾಶ್ಮೀರ
8. ಕರ್ನಾಟಕ
9. ತಮಿಳುನಾಡು
10. ತೆಲಂಗಾಣ

Share This Article
Leave a Comment

Leave a Reply

Your email address will not be published. Required fields are marked *