ಸಹೋದರಿ ನಿಶ್ಚಿತಾರ್ಥಕ್ಕೆ ಬಂದಿದ್ದ ಯೋಧ ಭೂಕುಸಿತಕ್ಕೆ ಬಲಿ

Public TV
1 Min Read

ತಿರುವನಂತಪುರ: ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಊರಿಗೆ ಬಂದಿದ್ದ ಯೋಧರೊಬ್ಬರು ಭೂಕುಸಿತಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದೆ.

ವಿಷ್ಣು ವಿಜಯನ್ ಮೃತ ದುರ್ದೈವಿ ಯೋಧ. ಇವರು ಪಶ್ಚಿಮಬಂಗಾಳದ ಬೆಂಗಾಲ್ ಸ್ಯಾಪರ್ಸ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ದಿನಗಳ ರಜೆಯ ಮೇಲೆ ಊರಿಗೆ ವಾಪಸ್ಸಾಗಿದ್ದರು.

ಕಳೆದ ವಾರದಲ್ಲಿ ವಿಷ್ಣು ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಆದರೆ ಕಳೆದ ಗುರುವಾರ ರಾತ್ರಿ ಮಲಪ್ಪುರಂ ಜಿಲ್ಲೆಯ ಕವಲಪ್ಪರ ಗ್ರಾಮದಲ್ಲಿ ಭಾರೀ ಗಾತ್ರದಲ್ಲಿ ಭೂಕುಸಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ ವಿಷ್ಣು ಹಾಗೂ ಕುಟುಂಬ ಸೇರಿ ಸರಿಸುಮಾರು 60 ಮಂದಿ ಮಣ್ಣಿನಡಿ ಸಿಲುಕಿದ್ದಾರೆ.

ವಿಷ್ಣು, ತಂದೆ ವಿಜಯನ್, ತಾಯಿ, ಸಹೋದರಿ ಜಿಶ್ನಾ ಹಾಗೂ ಇತರ ಇಬ್ಬರು ಸಂಬಂಧಿಕರು ಮನೆಯೊಳಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಇವರ ಮೃತದೇಹಕ್ಕಾಗಿ ಸತತ 4 ದಿನಗಳಿಂದ ಕಾರ್ಯಾಚರಣೆ ನಡೆದಿದ್ದು, ನಿನ್ನೆ ಮನೆಯ ಅವಶೇಷಗಳು ದೊರೆತಿವೆ. ಹೀಗಾಗಿ 6 ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ. ಘಟನೆಯಲ್ಲಿ ವಿಷ್ಣು ಸಹೋದರ ಜಿಷ್ಣು ಭಾರೀ ಅವಘಡದಿಂದ ಪಾರಾಗಿದ್ದಾರೆ.

ಜಿಷ್ಣು ತನ್ನ ಗೆಳಯರೊಂದಿಗೆ ಮತ್ತೊಂದೆಡೆ ಭೂಕುಸಿತ ಉಂಟಾದ ಪ್ರದೇಶದಲ್ಲಿ ಅಲ್ಲಿನ ಜನರಿಗೆ ಸಹಾಯ ಮಾಡಲು ತೆರಳಿದ್ದರು. ಹೀಗಾಗಿ ಅವರು ಬಚಾವ್ ಆಗಿದ್ದಾರೆ. ಹೀಗೆ ಸಹಾಯ ಮಾಡಿ ತನ್ನ ಮನೆಯ ಕಡೆ ಜಿಷ್ಣು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಭಾರೀ ಗಾತ್ರದಲ್ಲಿ ಮತ್ತೆ ಭೂ ಕುಸಿತವಾಗಿದೆ. ಪರಿಣಾಮ ಜಿಷ್ಣು ಕುಟುಂಬ ಅದರಲ್ಲಿ ಸಿಲುಕಿಕೊಂಡಿದ್ದು, ಜಿಷ್ಣು ತಮ್ಮ ಕುಟುಂಬಸ್ಥರಿಗಾಗಿ ಕಣ್ಣೀರಿಡುತ್ತಾ ಹುಡುಕಾಟ ನಡೆಸಿದ್ದಾರೆ.

ಕೂಡಲೇ ಜಿಷ್ಣು ಗೆಳೆಯ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ತಂಡಕ್ಕೆ ಮನೆಗಳಿರುವ ಪ್ರದೇಶಗಳನ್ನು ರಾಜೇಶ್ ತೋರಿಸಿಕೊಟ್ಟರು.

ಸೋಮವಾರ ನಾವು ವಿಷ್ಣು ಮನೆಯನ್ನು ಗುರುತಿಸಿದ್ದೇವೆ. ಮನೆಯ ಮೇಲೆ ಸಾಕಷ್ಟು ಅಡಿ ಮಣ್ಣು ಬಿದ್ದಿದೆ. ಹೀಗಾಗಿ ಮಂಗಳವಾರ ಮಣ್ಣನ್ನು ಸ್ಲ್ಯಾಬ್ ಗಳ ರೀತಿಯಲ್ಲಿ ಕಟ್ ಮಾಡಿ ಶೋಧ ಕಾರ್ಯ ಮುಂದುವರಿಸುತ್ತೇವೆ. ಇಂದು ಮೃತದೇಹಗಳನ್ನು ಹೊರತೆಗೆಯುವುದಾಗಿ ರಾಜೇಶ್ ಭರವಸೆ ನೀಡಿದ್ದಾರೆ.

ಸದ್ಯ ಕವಲಪ್ಪರ ಪ್ರದೇಶದಲ್ಲಿ ಸೋಮವಾರ ಸುಮಾರು 19 ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *