ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?

Public TV
2 Min Read

ತಿರುವಂತನಪುರಂ: ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್. ನೀರು, ಪ್ರಸಾದದಲ್ಲಿ ವಿಷ ಬೆರೆಸಿ ಅಯ್ಯಪ್ಪ ಮಾಲಾಧಾರಿಗಳನ್ನು ಹತ್ಯೆ ಮಾಡಲು ಐಸಿಸ್ ಉಗ್ರರು ಸಂಚು ರೂಪಿಸಿರುವ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ.

ರೈಲಿನ ಒಳಗಡೆ ಮತ್ತು ನಿಲ್ದಾಣದಲ್ಲಿ ವಿಷ ಮಿಶ್ರಿತ ನೀರನ್ನು ಸರಬರಾಜು ಮಾಡಿ ಭಕ್ತರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇರಳ ಪೊಲೀಸರಿಗೆ ನೀಡಿದೆ.

ಗುಪ್ತಚರ ಇಲಾಖೆಯ ಮಾಹಿತಿ ಅನ್ವಯ ತ್ರಿಶ್ಯೂರ್ ನಲ್ಲಿ ರೈಲ್ವೇ ಪೊಲೀಸರು ಮಲೆಯಾಳಂನಲ್ಲಿ ಪತ್ರವನ್ನು ಬಿಡುಗಡೆ ಮಾಡಿದ್ದು, ರೈಲ್ವೇ ನಿಲ್ದಾಣದಲ್ಲಿ ಶಮರಿಮಲೆ ಯಾತ್ರಾರ್ಥಿಗಳ ಮತ್ತು ಇತರೆ ಯಾತ್ರಿಗಳ ಕುಡಿಯುವ ನೀರು, ಆಹಾರದ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಇದರ ಭಾಗವಾಗಿ ಶಬರಿಮಲೆ ಅಯ್ಯಪ್ಪ ಭಕ್ತರ ಮೇಲೆ ಟಾರ್ಗೆಟ್ ಮಾಡಿದ್ದಾರೆ ಎಂಬುದಾಗಿ ವೆಬ್‍ಸೈಟ್ ಒಂದು ವರದಿ ಮಾಡಿದೆ.

ಇತ್ತೀಚೆಗೆ ಮಲೆಯಾಳಂ ಭಾಷೆಯಲ್ಲಿರುವ ಐಸಿಸ್ ಬೆದರಿಕೆ ಇರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 10 ನಿಮಿಷಗಳ ಈ ಆಡಿಯೋ ಬೆದರಿಕೆಯಲ್ಲಿ, ಐಸಿಸ್ ಉಗ್ರನೊಬ್ಬ ವಾಹನಗಳನ್ನು ಬಳಸಿ ದಾಳಿಗೆ ಕರೆ ನೀಡಿದ್ದ. ಅಮೆರಿಕ, ಯೂರೋಪ್ ಸೇರಿದಂತೆ ವಿಶ್ವದ ಹಲವೆಡೆ ಹೇಗೆ ಟ್ರಕ್, ಕಾರ್‍ಗಳನ್ನು ಅಡ್ಡಾದಿಡ್ಡಿ ನುಗ್ಗಿಸಿ ಜನರನ್ನು ಹತ್ಯೆ ಮಾಡಲಾಗಿದೆಯೋ ಅದೇ ರೀತಿ ಭಾರತದಲ್ಲೂ ಮಾಡಬೇಕೆಂದು ಪ್ರಚೋದನೆ ನೀಡಿದ್ದ.

ಕುಂಭಮೇಳ, ತ್ರಿಶೂರ್ ಪೂರಮ್ ಸೇರಿದಂತೆ ಲಕ್ಷಾಂತರ ಜನರು ಭಾಗಿಯಾಗುವ ಕಾರ್ಯಕ್ರಮಗಳನ್ನು ಟಾರ್ಗೆಟ್ ಮಾಡಬೇಕು. ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ ಆಹಾರದಲ್ಲಿ ವಿಷವನ್ನು ಬೆರೆಸಿ ಕೃತ್ಯ ಎಸಗಿ ಎಂದು ಆತ ಆಡಿಯೋದಲ್ಲಿ ಕರೆ ನೀಡಿದ್ದ.

ಕೆಲ ವರ್ಷಗಳಿಂದ ಸುಮಾರು 100 ಮಂದಿ ಕೇರಳೀಯರು ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಕೇರಳ ಪೊಲೀಸರು ಈ ಹಿಂದೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಾಟ್ಸಪ್, ಟೆಲಿಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿನಿಮಯವಾದ 300ಕ್ಕೂ ಹೆಚ್ಚು ಧ್ವನಿ ಸಂದೇಶಗಳು ಮತ್ತು ಇತರ ದಾಖಲೆಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿತ್ತು.

 

Share This Article
Leave a Comment

Leave a Reply

Your email address will not be published. Required fields are marked *