ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿರೋ ಪುತ್ರನನ್ನು ನೆನೆದು ಕಣ್ಣೀರಿಟ್ಟ ಕೇರಳದ ವೃದ್ಧ ದಂಪತಿ

Public TV
1 Min Read

ತಿರುವನಂತಪುರಂ: ಇರಾನ್ (Iran) ವಶಪಡಿಸಿಕೊಂಡಿರುವ, ಯುಎಇಯಿಂದ ಮುಂಬೈಗೆ (Mumbai) ಬರುತ್ತಿದ್ದ ಹಡಗಿನಲ್ಲಿದ್ದ (Container Ship) ತಮ್ಮ ಮಗನ ಸುರಕ್ಷತೆಯ ಬಗ್ಗೆ ಕೇರಳದ (Kerala) ವೃದ್ಧ ದಂಪತಿ ಆತಂಕ ವ್ಯಕ್ತಪಡಿಸಿದ್ದು, ಆತನ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಬಳಿ ಶನಿವಾರ ಇರಾನ್ ಸೇನೆ ಇಸ್ರೇಲ್‍ಗೆ (Israel) ಸಂಬಂಧಿತ ಎಂಎಸ್‍ಸಿ ಏರೀಸ್ ಎಂಬ ಸರಕು ತುಂಬಿದ್ದ ಹಡಗನ್ನು ವಶಪಡಿಸಿಕೊಂಡಿದೆ. ಹಡಗಿನಲ್ಲಿದ್ದ ಸುಮಾರು 17 ಮಂದಿ ಭಾರತೀಯರು ಇರಾನ್ ವಶದಲ್ಲಿದ್ದು, ಇದರಲ್ಲಿ ಕೇರಳ ಮೂಲದ ಶ್ಯಾಮನಾಥ್ ಕೂಡ ಸೇರಿದ್ದಾರೆ. ಇದೀಗ ಶ್ಯಾಮನಾಥ್ ಪೋಷಕರಾದ ವಿಶ್ವನಾಥನ್ ಮತ್ತು ಶ್ಯಾಮಲಾ ಅವರು ಶಿಪ್ಪಿಂಗ್ ಕಂಪನಿಯೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

ತಮ್ಮ ಮಗನ ಸುರಕ್ಷತೆಯ ಬಗ್ಗೆ ಕಾಳಜಿ ಇದೆ. ವಶಪಡಿಸಿಕೊಂಡ ನಂತರ ಅವರು ಹಡಗಿನಲ್ಲಿರುವ ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ವಿಶ್ವನಾಥನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆರಳದ ವೆಲ್ಲಿಪರಂಬಲ್ಲಿಯ ಶ್ಯಾಮನಾಥ್, ಕಳೆದ 10 ವರ್ಷಗಳಿಂದ ಎಂಎಸ್‍ಸಿ ಹಡಗಿನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದರು. ಸಿಬ್ಬಂದಿಯಲ್ಲಿ ಶ್ಯಾಮನಾಥ್ ಜೊತೆಗೆ ನೆರೆಯ ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳ ಇಬ್ಬರು ವ್ಯಕ್ತಿಗಳೂ ಇದ್ದಾರೆ ಎಂದು ವಿಶ್ವನಾಥನ್ ಹೇಳಿದ್ದಾರೆ.

ಹಡಗಿನಲ್ಲಿ ಭಾರತೀಯರಲ್ಲದೇ, ಫಿಲಿಪೈನ್ಸ್, ಪಾಕಿಸ್ತಾನ ಮತ್ತು ರಷ್ಯಾದವರು ಕೂಡ ಇದ್ದಾರೆ. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ತಮ್ಮ ಮಗ ಮತ್ತು ಅವನ ಸಹೋದ್ಯೋಗಿಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಮರಳಿ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶ್ಯಾಮನಾಥ್ ಅವರ ತಾಯಿ ಕೂಡ ಮಾಧ್ಯಮದವರೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ ಮಗನನ್ನು ನೆನೆದು ಗದ್ಗದಿತರಾದರು. ಸದ್ಯ ಹಡಗಿನಲ್ಲಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಇರಾನ್‍ನ ಅಧಿಕಾರಿಗಳೊಂದಿಗೆ ಭಾರತ ಮಾತುಕತೆ ನಡೆಸಿದೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

Share This Article