ಕೇರಳದಲ್ಲಿ ಭೂಕುಸಿತಕ್ಕೆ 38 ಮಂದಿ ಭೂಸಮಾಧಿ

Public TV
1 Min Read

ತಿರುವನಂತಪುರಂ: ಮಹಾ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ 38 ಮಂದಿ ಭೂಸಮಾಧಿಯಾದ ಘಟನೆ ಕೇರಳದಲ್ಲಿ ಮೇಪ್ಪಾಡಿಯಲ್ಲಿ ನಡೆದಿದೆ.

ಕೇರಳದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ರಣ ಭೀಕರ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದೇವರನಾಡಿದಲ್ಲಿ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಗುರುವಾರ ಸಂಜೆ 4 ಗಂಟೆಗೆ ಮಸೀದಿ, ದೇವಸ್ಥಾನ ಹಾಗೂ ಒಂದು ಎಸ್ಟೇಟ್ ಸಂಪೂರ್ಣ ನೆಲಸಮವಾಗಿದೆ. ದೇವಸ್ಥಾನ ಹಾಗೂ ಮಸೀದಿಯಲ್ಲಿ 70ಕ್ಕೂ ಹೆಚ್ಚು ಜನರಿದ್ದರು. ಅವರ ಪೈಕಿ 38 ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ಘಟನೆ ನಡೆದು ಮೂರ್ನಾಲ್ಕು ಗಂಟೆ ಕಳೆದರೂ ಸ್ಥಳಕ್ಕೆ ತಲುಪಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸೇನಾ ಹೆಲಿಕಾಪ್ಟರ್ ನೀಡುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಉತ್ತರ ಕೇರಳದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ಅಣೆಕಟ್ಟುಗಳ ಗೇಟ್‍ಗಳನ್ನು ತೆರೆಯಲು ಅಧಿಕಾರಿಗಳು ಆದೇಶಿಸಿದ್ದಾರೆ. ಮಲ್ಲಪುರಂನ ನಿಲಂಬುರ್ ಮತ್ತು ಎತ್ತರದ ಪ್ರದೇಶಗಳಾದ ಕೋಝಿಕ್ಕೋಡು, ಕಣ್ಣೂರು, ಇಡುಕ್ಕಿ ಮತ್ತು ಪಾಲಕ್ಕಾಡ್‍ಗಳು ಮಳೆಗೆ ತತ್ತರಿಸಿ ಹೋಗಿವೆ. ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಲವು ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮನೆಗೆ ಮರ ಬಿದ್ದು ಮೃತಪಟ್ಟಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ವಯನಾಡ್‍ನಲ್ಲಿ ಮಹಿಳೆಯೊಬ್ಬರು ಪ್ರಾಣ ಬಿಟ್ಟಿದ್ದರು.

ಮಲಪ್ಪುರಂ, ಕೋಝಿಕ್ಕೋಡು, ವಯನಾಡು ಮತ್ತು ಇಡುಕ್ಕಿ ನಾಲ್ಕು ಜಿಲ್ಲೆಗಳಲ್ಲಿ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳದ ಉತ್ತರ ಭಾಗ ಮತ್ತು ಇಡುಕ್ಕಿಯಲ್ಲಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *