ಮಳೆರಾಯನ ಆರ್ಭಟಕ್ಕೆ ಬೆಚ್ಚಿಬಿದ್ದ ಕೇರಳ – ಸಾವಿನ ಸಂಖ್ಯೆ 26ಕ್ಕೆ ಏರಿಕೆ

Public TV
2 Min Read

ತಿರುವನಂತಪುರ: ಮಳೆರಾಯನ ಆರ್ಭಟಕ್ಕೆ ನೆರೆಯ ಕೇರಳ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಗುಡ್ಡ ಕುಸಿತ, ಪ್ರವಾಹದಿಂದಾಗಿ ಕೇರಳಿಗರ ಬದುಕು ಸರ್ವನಾಶ ಆಗುತ್ತಿದ್ದು, ಇದುವರೆಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊಟ್ಟಾಯಂನ ಕೊಟ್ಟಿಕ್ಕಲ್ ಒಂದರಲ್ಲೇ 11 ಜನ ಬಲಿಯಾಗಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೇವಲ 2 ಗಂಟೆಗಳ ಅವಧಿಯಲ್ಲಿ ಹಲವೆಡೆ 5 ಸೆಂಟಿ ಮೀಟರ್‍ಗೂ ಹೆಚ್ಚು ಮಳೆಯಾಗಿದೆ. ಪರಿಸ್ಥಿತಿಯನ್ನು ಗಮನಿಸಿದರೆ `ಮಿನಿ ಮೇಘಸ್ಫೋಟ’ದಂತೆ ಭಾಸವಾಗುತ್ತಿದೆ. ಪೀರ್‍ಮೆಡ್ ಎಂಬಲ್ಲಿ ಅತ್ಯಧಿಕ 24 ಸೆಂಟಿ ಮೀಟರ್ ಮಳೆಯಾಗಿದ್ರೆ, ಚೆರುತೋನಿ, ಚೆಲಕುಡಿ ಮತ್ತು ಪೂಂಜಾರ್‍ ನಲ್ಲಿ 14 ಸೆಂಟಿ ಮೀಟಿರ್ ಮಳೆಯಾಗಿದೆ. ಇಡುಕ್ಕಿ – 168 ಎಂಎಂ, ಕೊಟ್ಟಾಯಂ – 165 ಎಂಎಂ, ಕಣ್ಣೂರು – 140 ಎಂಎಂ, ಎರ್ನಾಕುಲಂ – 129 ಎಂಎಂ ಹಾಗೂ ಪಲಕ್ಕಾಡ್ – 124 ಮಿಲಿ ಮೀಟರ್ ಮಳೆಯಾಗಿದೆ. ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಪಟ್ಟಣಂತಿಟ್ಟ, ತ್ರಿಶ್ಶೂರ್ ಜಿಲ್ಲೆಗಳಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ – ಶಬರಿಮಲೆ ಭಕ್ತರಿಗೆ ಪಂಪಾ ನದಿಗೆ ಇಳಿಯದಂತೆ ಎಚ್ಚರಿಕೆ

 

ತಿರುವನಂತಪುರ, ವಯನಾಡ್ ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ. ಇಡುಕ್ಕಿಯಲ್ಲಿ 3 ದೇಹಗಳು ತೇಲಿ ಬಂದಿವೆ. ಡ್ಯಾಮ್‍ಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹರಿಬಿಡಲಾಗಿದೆ. ನಾಳೆ, ನಾಡಿದ್ದು ಶಬರಿಮಲೆ ಯಾತ್ರೆ ನಿಷೇಧಿಸಲಾಗಿದೆ. ಅಕ್ಟೋಬರ್ 20 ರವರೆಗೆ ಶಾಲಾ-ಕಾಲೇಜ್‍ಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಸೇನೆ ಕೈ ಜೋಡಿಸಿದ್ದು ಭರದಿಂದ ರಕ್ಷಣೆ ಕಾರ್ಯಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ದೇವರ ನಾಡು ಕೇರಳದಲ್ಲಿ ಜಲಪ್ರಳಯ – ಜಲಾಸುರನ ಆಟಕ್ಕೆ 6 ಸಾವು, 15 ಮಂದಿ ನಾಪತ್ತೆ

ಜನ ಎಚ್ಚರಿಕೆಯಿಂದ ಇರಿ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಪಿಣರಾಯಿ ಜೊತೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಸಕಲ ಸಹಾಯದ ಭರವಸೆ ನೀಡಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿರೋದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ವಯನಾಡು ಜನತೆಗೆ ಸಂಸದ ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *