ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

Public TV
2 Min Read

– ಆಸ್ಪತ್ರೆಗೆ ದಾಖಲಾಗಲು ಒಪ್ಪದ ಕುಟುಂಬ

ತಿರುವಂತಪುರಂ: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಂಡು ಬಂದ ರಾಜ್ಯ ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಕೊರೊನಾ ವೈರಸ್ ಪತ್ತೆಯಾಗಿರುವ ಕುಟುಂಬದವರು, ಪಥನಮತ್ತಟ್ಟ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಎಲ್ಲರನ್ನು ಪಥನಮತ್ತಟ್ಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದು, ಅಲ್ಲಿಂದ ಇವರಿಗೆ ಸೋಂಕು ತಗಲುಲಿದೆ ಎಂದು ಹೇಳಲಾಗುತ್ತದೆ.

ಇದರ ಬಗ್ಗೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು, ಕೊರೊನಾ ವೈರಸ್‍ಗೆ ತುತ್ತಾಗಿರುವ ಕುಟುಂಬದವರು ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಅವರನ್ನು ಸ್ಕ್ರೀನಿಂಗ್ ಮಾಡಲು ಆಗಿಲ್ಲ. ಜೊತೆಗೆ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ. ನಂತರ ನಾವು ಅವರ ಮನವೊಲಿಸಿ ಆಸ್ಪತ್ರೆ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: 1 ಲಕ್ಷ ದಾಟಿದ ಕೊರೊನಾ ಪ್ರಕರಣ – ಇದುವರೆಗೆ 3,412 ಸಾವು!

ಈಗ ಸದ್ಯಕ್ಕೆ ಅವರನ್ನು ಪಥನಮತ್ತಟ್ಟ ಜೆನರಲ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದರು. ಹೀಗಾಗಿ ಇವರಿಗೆ ಸೋಂಕು ತಗುಲಿದೆ. ಈಗ ನಾವು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕುಟುಂಬವನ್ನು ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಶೈಲಜಾ ಅವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

ಭಾರತದ ಮೊದಲ ಮೂರು ಕೊರೊನ ವೈರಸ್ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು. ಮೂವರೂ ರೋಗಿಗಳು ಚೀನಾದ ವುಹಾನ್‍ನ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಆದರೆ ಈಗ ಅವರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜೊತೆಗೆ ಸ್ವತಃ ಪ್ರಧಾನಿ ಮೋದಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗವು ಮತ್ತುಷ್ಟು ಹರಡುವ ಲಕ್ಷಣಗಳು ಕಂಡು ಬಂದರೆ ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ ವೈರಸ್ ಹರಡದ ರೀತಿಯಲ್ಲಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

ಇಟಲಿಯಲ್ಲಿ ಸುಮಾರು 6,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 225 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವೈರಸ್ ಕಂಡು ಬಂದಿರುವ ಇಟಲಿಯ ಉತ್ತರದ ಹೆಚ್ಚಿನ ಭಾಗಗಳನ್ನು ಇಟಾಲಿಯನ್ ಸರ್ಕಾರವು ಲಾಕ್ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಗರದಿಂದ ಕಾಣಿಸಿಕೊಂಡ ಕೊರೊನಾ ವೈರಸ್, ಈಗ ಸುಮಾರು 95ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಗೆ ಹರಡಿದೆ. 3,500ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು ಒಂದು ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *