ತಿರುವನಂತಪುರಂ: ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿರುವ ಹಿನ್ನೆಲೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಪಾಲಕ್ಕಾಡ್ (Palakkad) ಶಾಸಕ ರಾಹುಲ್ ಮಾಂಕೂಟತ್ತಿಲ್ (Rahul Mamkootathil) ಅವರನ್ನು ಕೇರಳ (Kerala) ಪ್ರದೇಶ ಕಾಂಗ್ರೆಸ್ ಸಮಿತಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಈ ಬಗ್ಗೆ ಮಾತನಾಡಿದ ಹಿರಿಯ ಕಾಂಗ್ರೆಸ್ (Congress) ನಾಯಕ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ. ಮುರಳೀಧರನ್ (K Muraleedharan), ರಾಹುಲ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದನ್ನು ದೃಢಪಡಿಸಿದ್ದಾರೆ. ರಾಹುಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದನ್ನು ಖಚಿತಪಡಿಸುವ ಯಾವುದೇ ಅಧಿಕೃತ ಪ್ರಕಟಣೆಯನ್ನು ಕೆಪಿಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ. ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾದ ರಾಹುಲ್ ಅವರು, ಶಾಸಕ ಸ್ಥಾನದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುವುದನ್ನು ಅವರೇ ನಿರ್ಧರಿಸಬೇಕು ಎಂದು ಮುರಳೀಧರನ್ ಹೇಳಿದ್ದಾರೆ. ಇದನ್ನೂ ಓದಿ: ಗೃಹ ಶುದ್ಧಿ ಅಭಿಯಾನಕ್ಕೆ ಚಾಲನೆ – ಮಾನವ ಕಳ್ಳ ಸಾಗಣೆಯನ್ನು ಸರ್ಕಾರ, ಸಮಾಜ ಒಗ್ಗೂಡಿ ಎದುರಿಸಬೇಕು: ಗೆಹ್ಲೋಟ್
ರಾಹುಲ್ ಅವರು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವುದು ಅವರ ವಿರುದ್ಧ ಪಕ್ಷ ಕೈಗೊಂಡಿರುವ ಮೊದಲ ಕ್ರಮ, ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದು ಎರಡನೇ ಕ್ರಮ, ಮುಂದೆ ಇನ್ನೂ ಹೆಚ್ಚಿನ ಆರೋಪಗಳು ಕೇಳಿ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೇರಿದಂತೆ ಮೂರನೇ ಕ್ರಮವೂ ಪಕ್ಷ ತೆಗೆದುಕೊಳ್ಳಲಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅನ್ನು ದೂಷಿಸಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಯಾವುದೇ ಪಕ್ಷವೂ ಈ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ರಾಹುಲ್ ವಿರುದ್ಧದ ಆರೋಪಗಳ ಬಗ್ಗೆ ಪಕ್ಷವು ಆಂತರಿಕ ಪರಿಶೀಲನೆ ನಡೆಸಲಿದೆ. ರಾಹುಲ್ ಅವರಿಗೂ ಉತ್ತರ ನೀಡಲು ಅವಕಾಶ ನೀಡಲಿದೆ ಎಂದು ಮುರಳೀಧರನ್ ತಿಳಿಸಿದ್ದಾರೆ.