ಕೇರಳದಲ್ಲಿ ಎರಡು ನೊರೊವೈರಸ್ ಪ್ರಕರಣ ಪತ್ತೆ

Public TV
2 Min Read

ತಿರುವನಂತಪುರಂ: ಕೊರೊನಾ ವೈರಸ್ ಹಾಗೂ ಮಂಕಿ ಪಾಕ್ಸ್ ಭೀತಿ ನಡುವೆ ಇದೀಗ ದೇಶದಲ್ಲಿ ಹೊಸ ವೈರಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಎರಡು ನೊರೊವೈರಸ್ ಪ್ರಕರಣಗಳು ವರದಿಯಾಗಿದೆ.

ವಿಝಿಂಜಂ ಪ್ರದೇಶದಲ್ಲಿ 2 ಮಕ್ಕಳಿಗೆ ನೊರೊವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಇನ್ನು ಈ ಹೊಸ ವೈರಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಪರಿಸ್ಥಿತಿ ಅವಲೋಕಿಸಿದೆ. ಪ್ರದೇಶದಿಂದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗಿದ್ದು, ಸರ್ಕಾರ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

ನವೆಂಬರ್ 2021ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ನೊರೊವೈರಸ್ ಪ್ರಕರಣಗಳು ವರದಿಯಾಗಿತ್ತು. ವಯನಾಡಿನ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ನಂತರ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತ್ತು. ಹಾಗಾಗಿ ಪುನಃ ಸೋಂಕಿನ ಹರಡುವಿಕೆ ವರದಿಯಾಗಿರಲಿಲ್ಲ. ಇದನ್ನೂ ಓದಿ: ಉಡುಪಿ ಕಾಲೇಜ್‌ ಪ್ರವೇಶಕ್ಕೆ ಬೇಡಿಕೆ – ಹೆಚ್ಚಾಯ್ತು ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ

ನೊರೊ ವೈರಸ್ ಎಂದರೇನು?
ನೊರೊವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್, ಇದು ಜಠರದ ಕಾಯಿಲೆಗೆ ಕಾರಣವಾಗುತ್ತದೆ. ಕಲುಷಿತ ಸ್ಥಳಗಳ ಸಂಪರ್ಕಕ್ಕೆ ಬರುವ ಮೂಲಕ ಅಥವಾ ಕಲುಷಿತ ಆಹಾರವನ್ನು ಸೇವಿಸುವುದರಿಂದ ಈ ವೈರಸ್ ಹರಡಬಹುದು. ಇದಲ್ಲದೆ, ಇದು ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಇದು ಮಾತ್ರವಲ್ಲದೆ, ಒಬ್ಬ ವ್ಯಕ್ತಿಯು ಹಲವಾರು ಬಾರಿ ನೊರೊವೈರಸ್ ಸೋಂಕಿಗೆ ಒಳಗಾಗಬಹುದು, ಏಕೆಂದರೆ ಅದರಲ್ಲಿ ಹಲವಾರು ವಿಧಗಳಿವೆ ಎಂದು ಹೇಳಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *