ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

Public TV
1 Min Read

– ಆತಂಕದ ನಡುವೆ ಸೌಹಾರ್ದ ಜಾಥಾಕ್ಕೆ ಕ್ಷಣಗಣನೆ

ಮಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿದೆ. ಸಂಘ ಪರಿವಾರ ಪಿಣರಾಯಿ ಬರದಂತೆ ತಡೆಯಲು ಹರತಾಳಕ್ಕೆ ಕರೆ ನೀಡಿದ್ದರೆ, ರಾಜ್ಯ ಸರ್ಕಾರ ಕೇರಳ ಸಿಎಂ ಕಾರ್ಯಕ್ರಮಕ್ಕೆ ಸರ್ವ ರೀತಿಯ ಭದ್ರತೆ ನೀಡಲು ಸಜ್ಜಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, 5ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಕಂಡುಬಂದರೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದೆಂದು ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ 3 ಸಾವಿರಕ್ಕಿಂತಲೂ ಹೆಚ್ಚು ಕೆಎಸ್‍ಆರ್‍ಪಿ ಪೊಲೀಸರನ್ನು ಮಂಗಳೂರು ನಗರದ ಆಯಕಟ್ಟಿನ ಭಾಗದಲ್ಲಿ ನಿಯೋಜಿಸಲಾಗಿದೆ. ಮಾತ್ರವಲ್ಲದೇ 600 ಸಿಸಿ ಕ್ಯಾಮೆರಾಗಳು ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಡಲಾಗಿದೆ. ಆದರೂ, ಸಂಘಪರಿವಾರ ಕರೆ ನೀಡಿರುವ ಬಂದ್ ರಾತ್ರಿಯಿಂದಲೇ ಶುರುವಾಗಿದೆ.

ಮಂಗಳೂರಿನ ಕೋಟೆಕಾರು ಬಳಿ ಮಂಗಳೂರು -ಕಾಸರಗೋಡು ಕೆಎಸ್‍ಆರ್‍ಟಿಸಿ ಬಸ್ ಹಾಗು ಕೇರಳದ ಕಾಸರಗೋಡು ಜಿಲ್ಲೆಯ ಕುಂಜತ್ತೂರು ಬಳಿ ಕೇರಳ ಸಾರಿಗೆ ಬಸ್‍ಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿ ಬಸ್ ಮುಂಭಾಗದ ಗಾಜನ್ನು ಪುಡಿ ಮಾಡಿದ್ದಾರೆ. ಜೊತೆಗೆ ಅಲ್ಲಲ್ಲಿ ಕಲ್ಲುಗಳನ್ನಿಟ್ಟು ರಸ್ತೆ ಸಂಚಾರಕ್ಕೆ ರಾತ್ರಿಯೇ ಅಡ್ಡಿ ಉಂಟು ಮಾಡಿದ್ದಾರೆ.

ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾರಂಭಿಸಲಿವೆ. ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಬದಲಾವಣೆಯಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಪಪಡಿಸಿದೆ. ಇಂದು ಬೆಳಗ್ಗೆ ಖಾಸಗಿ ಬಸ್ ಬಿಟ್ರೆ ಕೆಎಸ್ ಆರ್ ಟಿಸಿ ಬಸ್‍ಗಳು ಎಂದಿನಂತೆ ಓಡಾಟ ನಡೆಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *