ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

Public TV
1 Min Read

ತಿರುವನಂತಪುರಂ: ಪ್ರವಾಸಿ ದೋಣಿ (Tourist Boat) ಮುಳುಗಡೆಯಾಗಿ 22 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ (Kerala Government) ಘೋಷಣೆ ಮಾಡಿದೆ.

ಪ್ರವಾಸಿ ದೋಣಿ ದುರಂತ ಸಂಬಂಧ ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಿಎಂಒ ಮಾಹಿತಿ ನೀಡಿದೆ.

ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು.

ಏನಿದು ಘಟನೆ?: ಸುಮಾರು 30 ಮಂದಿಯಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

ಈ ಸಂಬಂಧ ಮಲಪ್ಪುರಂ ಪೊಲೀಸರು ಮಾಧ್ಯಮದ ಜೊತೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಬಳಿಕ ದುರಂತ ಸಂಬಂಧ ತನಿಖೆ ನಡೆಸುತ್ತೇವೆ. ಹೆಚ್ಚಿನ ಜನ ಹಾಕಿಕೊಂಡು ಹೋಗಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಯ ಬಳಿಕ ದೋಣಿಯ ಮಾಲೀಕ ನಜಾರ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.

Share This Article