ಕುತೂಹಲ ಕೆರಳಿಸಿದ `ಕೆಂಡ’ ಟೀಸರ್

Public TV
2 Min Read

ಶೀರ್ಷಿಕೆಯಿಂದಲೇ ಕನ್ನಡ ಕಲಾಭಿಮಾನಿಗಳ ಕಣ್ಣಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ `ಕೆಂಡ’. ಸಹದೇವ್ ಕೆಲವಡಿಯವರ ನಿರ್ದೇಶನದಲ್ಲಿ ರೂಪಾ ರಾವ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರ ಘೋಷಣೆಯಾದಾಗಿಂದಲೂ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸದ್ದು ಮಾಡುತ್ತಲೇ ಇದೆ. ಮೊದಲು ಮೋಷನ್ ಪೋಸ್ಟರ್ ನಿಂದ ಸಿನಿಮಾ ಪ್ರೇಮಿಗಳ ಗಮನ ಸೆಳೆದ ಕೆಂಡ, ಅನಂತರ ಕ್ಯಾರೆಕ್ಟರ್ ಟೀಸರ್ ನಿಂದ ಮಗದಷ್ಟು ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಂಡಿತ್ತು. ಇದೀಗ, `ಕೆಂಡ’ ಟೀಸರ್ ಕಣಕ್ಕಿಳಿದಿದೆ. ಮಾಸ್ ಸಿನಿಮಾ ಪ್ರೇಮಿಗಳ ಜೊತೆಗೆ ಸಿನಿಮಾ ಮಂದಿಯನ್ನೂ ಬೆರಗುಗೊಳಿಸುತ್ತಿದೆ.

ಹೌದು, `ಕೆಂಡ’ದೊಳಗೆ ಗಂಭೀರ ಕಥೆ ಅಡಗಿರುವುದು ಒಂದು ನಿಮಿಷ 7 ಸೆಕೆಂಡ್ ಟೀಸರ್ ನಿಂದಲೇ ಗೊತ್ತಾಗುತ್ತಿದೆ. ಬಹುಕೋಟಿ ವೆಚ್ಚದ ಕಮರ್ಷಿಯಲ್ ಸಿನಿಮಾಗಳ ಅಬ್ಬರ- ಆರ್ಭಟದ ನಡುವೆ ಬೆಳ್ಳಿತೆರೆಗೆ ಕಿಚ್ಚು ಹಚ್ಚೋದಕ್ಕೆ ಭಿನ್ನ ಕಥಾನಕದ `ಕೆಂಡ ಸದ್ದಿಲ್ಲದೇ ತಯಾರಾಗಿದೆ. ರಂಗಭೂಮಿ ಪ್ರತಿಭೆಗಳಾದ ಸಚ್ಚಾ, ಶರತ್ ಗೌಡ, ಪ್ರಣವ್ ಶ್ರೀಧರ್, ಬಿ.ವಿ ಭರತ್ , ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶ್‍ಪಾಂಡೆ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಬೆಂಗಳೂರಿನಂಥಾ ಮಹಾನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ,  ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕಿ ಹೇಗೆ ನರಳುತ್ತಿದೆ ಎಂಬುದನ್ನು, ರಾಜಕೀಯ ಹಾಗೂ ಅಪರಾಧದ ತನಿಖೆ ಮೂಲಕ ಜಗತ್ತಿನ ಮುಂದೆ ಹರವಿಡಲು ಹೊರಟಿದ್ದಾರೆ ಯುವ ನಿರ್ದೇಶಕ ಸಹದೇವ್ ಕೆಲವಡಿಯವರು.

ನಿರ್ದೇಶಕ ಸಹದೇವ್ ಕೆಲವಡಿಯವರು ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು . ಅದರ ಆರಂಭಿಕ ಹೆಜ್ಜೆಯಾಗಿ  ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಹುಟ್ಟುಹಾಕಿದರು. ರೂಪಾ ರಾವ್ ನಿರ್ದೇಶನದ `ಗಂಟುಮೂಟೆ’ ಚಿತ್ರಕ್ಕೆ ಬಂಡವಾಳ ಹೂಡೋದ್ರ ಜೊತೆಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದರು. ಆ ಚಿತ್ರ ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ಇದೀಗ  ಮತ್ತೊಮ್ಮೆ ಇವರಿಬ್ಬರು `ಕೆಂಡ’ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ  ಸಿನಿಮಾದ ಮೂಲಕ ಸಹದೇವ್ ಕೆಲವಡಿ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.‌ಅಮೇಯುಕ್ತಿ ಬ್ಯಾನರ್ ಅಡಿಯಲ್ಲಿ `ಕೆಂಡ’ ತಯಾರಾಗಿದ್ದು,  ಈ ಭಾರಿ  ನಿರ್ಮಾಪಕಿಯಾಗಿ ರೂಪಾ ರಾವ್ ಸಾಥ್ ಕೊಟ್ಟಿದ್ದಾರೆ.

ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ. ಅದರಲ್ಲೂ ಗ್ಯಾಂಗ್‍ಸ್ಟರ್ ಮೂವೀ ನಿರ್ಮಾಣಕ್ಕೆ ಡಬ್ಬಲ್ ಗುಂಡಿಗೆ ಬೇಕು. ಆ ಎದೆಗಾರಿಕೆ ನಿರ್ಮಾಪಕಿ ರೂಪಾ ರಾವ್‍ಗೆ ಇರೋದ್ರಿಂದಲೇ `ಕೆಂಡ’ದಂತಹ ಗ್ಯಾಂಗ್‍ಸ್ಟರ್ ಸಿನಿಮಾಗೆ ಕೈ ಹಾಕಿದ್ದಾರೆ. ಈ ಸಿನಿಮಾ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರೋ ಕೆಂಡ ಟೀಮ್, ಟೀಸರ್ ಬಿಟ್ಟು,  ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ವಿಶೇಷ ಅಂದರೆ `ಕೆಂಡ’  ಹಲವಾರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ.

Share This Article