ನಾಳೆ ಮೋದಿಯಿಂದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಇಂದು ಸ್ಥಳ ಪರಿಶೀಲಿಸಿದ ಸಿಎಂ

Public TV
3 Min Read

ಬೆಂಗಳೂರು: ನಮ್ಮ ಹೆಮ್ಮೆಯ ನಾಡಪ್ರಭುಗಳ ಹೆಸರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಅಭಿವೃದ್ಧಿಗೆ ಪ್ರೇರಣೆಯಾಗುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಾರ್ವಜನಿಕ ಸಭಾ ವೇದಿಕೆ ಕಾರ್ಯಕ್ರಮದ ಸಿದ್ಧತೆ ಮತ್ತು ವ್ಯವಸ್ಥೆಗಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿದೆ ಮಾತನಾಡಿದ ಅವರು, ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದವರು ರಾಮ್ ಸುತಾರಾ ಅವರಾಗಿದ್ದಾರೆ. ಅವರು ದೇಶದಲ್ಲೇ ಅತ್ಯಂತ ಶ್ರೇಷ್ಠ ಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ಅಹಮದಾಬಾದ್‍ನಲ್ಲಿರುವ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿಯನ್ನು ಹಾಗೂ ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದ ಖ್ಯಾತಿ ಅವರದ್ದು. ನಾಳೆ ಪ್ರಧಾನಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಅವರ ಕೈಚಳಕದಿಂದ ಇಷ್ಟು ಬೃಹತ್ ಮೂರ್ತಿ ಮೈದಳೆದಿದೆ. ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಪ್ರಧಾನಿಗಳಿಂದ ಕನಕದಾಸ ಹಾಗೂ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ: ನಾಳೆ ಪ್ರಧಾನಮಂತ್ರಿಗಳು ಬೆಳಿಗ್ಗೆ 9 ಗಂಟೆಗೆ ಹೆ.ಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಮಾಡಲಿದ್ದಾರೆ. ಕನಕ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಆಗಮಿಸಿರುವುದು ಯೋಗಾಯೋಗಾ. ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಮಂತ್ರಿಗಳು ಸಮಸ್ತ ಮಾನವಕುಲಕ್ಕೆ ದಾರಿದೀಪವಾಗಿರುವ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಪಕ್ಕದಲ್ಲಿಯೇ ಇರುವ ವಾಲ್ಮೀಕಿ ಮೂರ್ತಿಗೂ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದರು.

ವಂದೇ ಭಾರತ್ ರೈಲು – ಬಹುದಿನಗಳ ಬೇಡಿಕೆಯ ಈಡೇರಿಕೆ: ನಂತರ ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ – ಹೈಸ್ಪೀಡ್ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಂಗಳೂರು- ಮೈಸೂರು, ಚೆನ್ನೈ ಕಡೆ ಪ್ರಯಾಣ ಮಾಡುವುದು, ಬೆಂಗಳೂರು- ಮೈಸೂರು ಪ್ರಯಾಣದ ಅವಧಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಬಹುದು. ಇದಕ್ಕಾಗಿ ಪ್ರಯಾಣಿಕರ ಬಹಳ ದಿನಗಳ ಬೇಡಿಕೆ ಇತ್ತು. ಅದನ್ನು ಪ್ರಧಾನಿಗಳು ವಂದೇ ಮಾತರಂ ಯೋಜನೆಯಲ್ಲಿ ಸೇರಿಸಿದ್ದು, ಭಾರತದಲ್ಲಿ ಐದನೇ ರೈಲು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಹೈಸ್ಪೀಡ್ ರೈಲನ್ನು ಉದ್ಘಾಟನೆ ಮಾಡುತ್ತಿರುವುದು ಆ ಭಾಗದ ಪ್ರಯಾಣಿಕರಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಕೂಡ ಅನುಕೂಲವಾಗಲಿದೆ ಎಂದರು.

ಟರ್ಮಿನಲ್ -2 ಉದ್ಘಾಟನೆ: ನಂತರ ವಿಮಾನನಿಲ್ದಾಣಕ್ಕೆ ಆಗಮಿಸಿ 2ನೇ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಟರ್ಮಿನಲ್ -2 ಅಂತರರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ. ಈಗಿರುವುದು 35 ಲಕ್ಷ ಸಾಮರ್ಥ್ಯವುಳ್ಳದ್ದು, ಇವೆರಡೂ ಸೇರಿದರೆ ದೇಶದ 2ನೇ ಅತಿ ದೊಡ್ಡ ಮತ್ತು ಅತಿ ಹೆಚ್ಚು ಫುಟ್‍ಪ್ರಿಂಟ್ ವಿಮಾನ ನಿಲ್ದಾಣವಾಗಲಿದೆ. ದೆಹಲಿಯ ನಂತರ ಅತಿ ದೊಡ್ಡ ವಿಮಾನನಿಲ್ದಾಣವಾಗಲಿದೆ. ಅದರ ಉದ್ಘಾಟನೆಯ ನಂತರ ಪ್ರಗತಿ ಪ್ರತಿಮೆ ಅನಾವರಣ ಮಾಡಿ ಸಾರ್ವಜನಿಕ ಸಭೆಗೆ ತೆರಳುತ್ತಾರೆ. ಅಲ್ಲಿ ಭಾಷಣ ಮುಗಿಸಿ ಮುಂದಿನ ಪ್ರಯಾಣ ಮಾಡಲಿದ್ದಾರೆ ಎಂದು ವಿವರಿಸಿದರು.

2-3 ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು: ಕಾಂಗ್ರೆಸ್ ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುತ್ತಿರುವ ಬಗ್ಗೆ ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. 3-4 ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಫ್ಘನ್‍ನಲ್ಲಿ ಅಮ್ಯೂಸ್‍ಮೆಂಟ್ ಪಾರ್ಕ್‍ಗೆ ಹೋಗಲು ಮಹಿಳೆಯರಿಗೆ ಇನ್ಮುಂದೆ ಅವಕಾಶವಿಲ್ಲ

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ‌. ಸಿ‌. ಎನ್. ಅಶ್ವತ್ಥ್ ನಾರಾಯಣ, ಆರ್. ಅಶೋಕ್, ಸಿ‌.ಸಿ. ಪಾಟೀಲ್ ಹಾಗೂ ಮತ್ತಿತರರು ಹಾಜರಿದ್ದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ – ಭಾವಚಿತ್ರಕ್ಕೆ ಕ್ಷೀರಾಭಿಷೇಕ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *