ನೀಟ್ ರೋಲ್ ನಂಬರ್ ದಾಖಲಿಸಲು ಜುಲೈ 8ರವರೆಗೆ ಅವಕಾಶ: ಕೆಇಎ

Public TV
2 Min Read

ಬೆಂಗಳೂರು‌: ಈಗಾಗಲೇ ಯುಜಿಸಿಇಟಿಗೆ (UGCET) ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶನಿವಾರ ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ಜು.8ರಂದು ಬೆಳಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಲು ಅವಕಾಶ ಇರುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕೆನ್ನುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ನೀಟ್ (NEET) ರೋಲ್ ನಂಬರ್ ದಾಖಲಿಸಬೇಕು. ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರನ್ನು ಎನ್‌ಟಿಎ ಡಾಟಾದೊಂದಿಗೆ ತಾಳೆ ಮಾಡಿ, ಯುಜಿನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೆರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದುಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: 101.4 ಕೋಟಿ ಸಾಲ ಪಡೆದು ವಂಚನೆ ಕೇಸ್‌ – ಅಲ್ಲು ಅರ್ಜುನ್‌ ತಂದೆಗೆ 3 ಗಂಟೆ ಇಡಿ ಡ್ರಿಲ್‌

ಜುಲೈ 7ರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ
ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಹಾಗೂ ಇದುವರೆಗೂ ಕೆಇಎಯಲ್ಲಿ ಅರ್ಜಿ ಸಲ್ಲಿಸದೇ ಇರುವವರು ಜು.7ರಿಂದ 10ರವರೆಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆಗೆ ನಂತರದ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಗಿಲ್‌ ಗಿಲ್‌ ಗಿಲಕ್‌ – ಮತ್ತೊಂದು ʻಶುಭʼ ಶತಕ, ಕೊಹ್ಲಿ ದಾಖಲೆ ಸರಿಗಟ್ಟಿದ ಯುವ ನಾಯಕ

ಜು.8ರಿಂದ ಎನ್‌ಆರ್‌ಐ ವಾರ್ಡ್ ದಾಖಲೆ ಪರಿಶೀಲನೆ
ಅರ್ಜಿಯಲ್ಲಿ ಎನ್‌ಆರ್‌ಐ ವಾರ್ಡ್ ಕ್ಲೇಮ್ ಮಾಡಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಜುಲೈ 8ರಿಂದ 10ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಮೊದಲ ದಿನ, ನೀಟ್‌ನಲ್ಲಿ ನಾಲ್ಕು ಲಕ್ಷದವರೆಗೆ ರ‍್ಯಾಂಕ್ ಪಡೆದವರು ಹಾಗೂ ಎರಡನೇ ದಿನ 8 ಲಕ್ಷ ಮತ್ತು ಮೂರನೇ ದಿನ 12 ಲಕ್ಷದವರೆಗೆ ರ‍್ಯಾಂಕ್ ಪಡೆದವರು ದಾಖಲೆ ಪರಿಶೀಲನೆಗೆ ಬರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಖಚಿತ: ಮತ್ತೆ ಭವಿಷ್ಯ ನುಡಿದ ಆರ್.ಅಶೋಕ್

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು: ದಾಖಲೆ ಪರಿಶೀಲನೆ
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಅಪೇಕ್ಷೆ ಪಟ್ಟಿರುವ ಕ್ಯಾಟಗರಿ-2ರಿಂದ 8ರವರೆಗಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಜುಲೈ 9 ಮತ್ತು 10ರಂದು ಕಾಲೇಜಿನಲ್ಲೇ ನಡೆಯಲಿದೆ. ಕೋರಮಂಗಲದ ಮೆಡಿಕಲ್ ಕಾಲೇಜಿನ ಕೌನ್ಸಿಲ್ ಕೊಠಡಿಯಲ್ಲಿ ಪರಿಶೀಲನೆ ನಡೆಯಲಿದ್ದು, ಮೂಲ ದಾಖಲೆಗಳ ಸಮೇತ ಎರಡೂ ದಿನ ಖುದ್ದು ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.

Share This Article