ʻಕೆಡಿʼ ಚಿತ್ರದ ನಿರ್ದೇಶಕ, ನಟ ಪ್ರೇಮ್‌ಗೆ (Prem) ಎಮ್ಮೆ ಕೊಡಿಸೋದಾಗಿ ಹೇಳಿ ಗುಜರಾತ್ ಮೂಲದ ವ್ಯಕ್ತಿಯೊಬ್ಬ ಲಕ್ಷ ಲಕ್ಷ ಹಣ ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ.
ಕೆಡಿ ಸಿನಿಮಾ ನಿರ್ದೇಶಕ ಪ್ರೇಮ್ ಹೈನುಗಾರಿಕೆಗಾಗಿ ಗುಜರಾತ್ ಮೂಲದ ಎರಡು ಎಮ್ಮೆಗಳನ್ನ ಖರೀದಿಸಲು ಮುಂಗಡವಾಗಿ 25,000 ಹಣ ನೀಡಿದ್ದರು. ಬಳಿಕ ಗುಜರಾತ್ ಮೂಲದ ವನರಾಜ್ ಭಾಯ್ ಎಮ್ಮೆ ವಿಡಿಯೋ ಹಾಗೂ ಫೋಟೋಗಳನ್ನ ವಾಟ್ಸಪ್ ಮೂಲಕ ಕಳಿಸಿದ್ದರು. ತದನಂತರ 3,75,000 ರೂ.ಗಳನ್ನ ಪ್ರೇಮ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಇದಾದ 1 ವಾರದೊಳಗೆ ಎಮ್ಮೆ ಕಳುಹಿಸುವುದಾಗಿ ಹೇಳಿದ್ದ ವ್ಯಕ್ತಿ ಮತ್ತೆ 50,000 ಹಣ ವರ್ಗಾವಣೆ ಮಾಡುವಂತೆ ಹೇಳಿದ್ದು, ಒಟ್ಟು 4.5ಲಕ್ಷ ಹಣವನ್ನ ನಿರ್ದೇಶಕ ಪ್ರೇಮ್ ವನರಾಜ್ ಎಂಬಾತನಿಗೆ ವರ್ಗಾಯಿಸಿದ್ದರು. ಆದ್ರೆ ಹಣ ಪಡೆದ ಬಳಿಕ ಎಮ್ಮ ಕೊಡಿಸ್ತೀನಿ ಅಂದವನು ನಾಪತ್ತೆಯಾಗಿದ್ದಾನೆ.
ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ವನರಾಜ್ ಭಾಯ್ ವಿಳಾಸಕ್ಕೆ ನಿರ್ದೇಶಕ ಪ್ರೇಮ್ ತಮ್ಮ ಹುಡುಗರನ್ನ ಕಳುಹಿಸಿ ಹುಡುಕಾಡಿಸಿದ್ದರು. ಆದ್ರೆ ಹಣ ಪಡೆದ ವನರಾಜ್ ಕೈಗೆ ಸಿಕ್ಕಿಲ್ಲ ಎಂದು ದೂರು ನೀಡಿದ್ದರು. ಹಣ ಪಡೆದ ವನರಾಜ್ ಭಾಯ್ ಎಮ್ಮೆಯನ್ನೂ ನೀಡದೇ ಹಣವನ್ನ ಮರಳಿ ಕೊಡದೇ ವಂಚಿಸಿದ್ದಾರೆಂದು ಆರೋಪ ಮಾಡಲಾಗಿತ್ತು. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಅವರು ಮ್ಯಾನೇಜರ್ ದಶಾವರ ಚಂದ್ರು ಮುಖಾಂತರ ದೂರು ದಾಖಲಿಸಿದ್ದರು.
ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಜುಲೈ 22ರಿಂದ ಜುಲೈ 24ರ ಮಧ್ಯೆ ಹಣ ಕಳುಹಿಸಿದ್ದ ನಿರ್ದೇಶಕ ಪ್ರೇಮ್‌ಗೆ ಕಳೆದೊಂದು ವಾರದ ಹಿಂದೆ ಎರಡು ಎಮ್ಮೆಗಳನ್ನ ಕಳುಹಿಸಿಕೊಟ್ಟಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮ್ಯಾನೇಜರ್ ದಶಾವರ ಚಂದ್ರು ಕೂಡಾ ಸ್ಪಷ್ಟನೆ ನೀಡಿದ್ದು, ವನರಾಜ್ ಎಂಬುವವರ ಫೋನ್ ಸ್ವಿಚ್ ಆಫ್ ಆಗಿತ್ತು, ತದನಂತರ ಎಮ್ಮೆ ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನು ಪ್ರೇಮ್ ಆಪ್ತ ಮೂಲಗಳ ಮಾಹಿತಿ ಪ್ರಕಾರ ಹಣ ವಾಪಾಸ್ ಕೊಡೋದಾಗಿ ಗುಜರಾತ್ ಮೂಲದ ವನರಾಜ್ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.
ನಿರ್ದೇಶಕ ಪ್ರೇಮ್ ಚಿತ್ರರಂಗದಲ್ಲಿ ಬ್ಯುಸಿ ಶೆಡ್ಯೂಲ್ ನಡುವೆಯೂ ತೋಟಗಾರಿಕೆ, ಹೈನುಗಾರಿಕೆ, ಹಳ್ಳಿಯ ಆಚರಣೆಗಳನ್ನ ಮಾತ್ರ ಸಿನಿಮಾದ ಜೊತೆ ಜೊತೆಗೆ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ತಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆಗಾಗಿ ಗುಜರಾತ್‌ನ ಗಿರ್ ತಳಿಯ ಎರಡು ಎಮ್ಮೆಯನ್ನ ಕೊಂಡುಕೊಳ್ಳಲು ಮುಂದಾಗಿದ್ದಾಗ ವಂಚನೆ ಆರೋಪ ಕೇಳಿ ಬಂದಿತ್ತು. ಸದ್ಯಕ್ಕೆ ಸ್ವತಃ ನಿರ್ದೇಶಕ ಪ್ರೇಮ್ ಹಾಗೂ ಅವರ ಮ್ಯಾನೇಜರ್ ಚಂದ್ರು ಸ್ಪಷ್ಟಪಡಿಸಿದ ಹಾಗೆ ಎಲ್ಲವೂ ಬಗೆಹರಿದಿದೆ ಎಂದಿದ್ದಾರೆ. ಸದ್ಯ ಕೆಡಿ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ನಿರ್ದೇಶಕ ಪ್ರೇಮ್.