ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಟಿಆರ್‌ಎಸ್‌ ಮೈತ್ರಿ!

Public TV
3 Min Read

ನವದೆಹಲಿ: ತೆಲಂಗಾಣ ರಾಷ್ಟ್ರಸಮಿತಿ (ಟಿಆರ್‌ಎಸ್‌) ಪಕ್ಷದ ನಾಯಕ ಹಾಗೂ ಸಿಎಂ ಕೆ ಚಂದ್ರಶೇಖರ್ ರಾವ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸೂಚನೆಯನ್ನು ಟಿಎಸ್‍ಆರ್ ಪಕ್ಷ ಮೂಲಗಳು ನೀಡಿದೆ.

ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ನೀಡುವಂತೆ ಸಿಎಂ ಚಂದ್ರಬಾಬುನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ ಕೇಂದ್ರ ಸರ್ಕಾರ ಮೇಲೆ ಒತ್ತಡ ತಂದು ಬಳಿಕ ಎನ್‍ಡಿಕೆ ಮೈತ್ರಿ ಕಳೆದುಕೊಂಡ ಬಳಿಕ ಮಹಾಮೈತ್ರಿಕೂಟದಲ್ಲಿ ಗುರುತಿಸಿಕೊಂಡಿತ್ತು. ಇದೇ ವೇಳೆ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವೂ ಸಹ ತೃತಿಯ ರಂಗದಲ್ಲಿ ಮೈತ್ರಿ ಮಾಡಿಕೊಳ್ಳುವ ಕಡೆ ಆಸಕ್ತಿ ತೋರಿತ್ತು. ಆದರೆ ಸದ್ಯ ಟಿಆರ್‌ಎಸ್‌ ಪಕ್ಷ ನಾಯಕ, ಸಿಎಂ ಚಂದ್ರಶೇಖರ್ ರಾವ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.

ಟಿಆರ್‌ಎಸ್‌ ಪಕ್ಷದ ಮೂಲಗಳ ಪ್ರಕಾರ ಪ್ರಧಾನಿ ಮೋದಿ ಭೇಟಿ ವೇಳೆ 2019 ರ ಚುಣಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಚುಣಾವಣಾಪೂರ್ವ ಮೈತ್ರಿ ಪಕ್ಷಕ್ಕೆ ಲಾಭಾಯಕವಾಗಿದ್ದು, ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಸಹಾಯಕವಾಗಲಿದೆ ಎಂಬುದು ಟಿಎಸ್‍ಆರ್ ಪಕ್ಷ ಮುಖಂಡರ ಅಭಿಪ್ರಾಯವಾಗಿದೆ. ಏಕೆಂದರೆ ತೆಲಂಗಾಣದಲ್ಲಿ ಬಿಜೆಪಿ ಪಕ್ಷ ಹೆಚ್ಚು ಪ್ರಭಾವ ಹೊಂದಿರದೇ ಇದ್ದರೂ ಕೆಲವು ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಬಿಜೆಪಿ ಪ್ರಭಾವ ನೆರವಾಗಲಿದೆ ಎಂಬುದು ಮೈತ್ರಿ ಹಿಂದಿನ ಉದ್ದೇಶವಾಗಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಈ ಹಿಂದೆಯೇ ಟಿಎಸ್‍ಆರ್ ಪಕ್ಷ ಸುಳಿವು ನೀಡಿತ್ತು. ಕಳೆದ ಎರಡು ವಾರಗಳ ಹಿಂದೆ ಕೇಂದ್ರ ಸರ್ಕಾರ ವಿರುದ್ಧ ಟಿಡಿಪಿ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಟಿಆರ್‌ಎಸ್‌ ಬೆಂಬಲ ನೀಡಿರಲಿಲ್ಲ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಲ್ಲಿ ಮಾಡಿದ ಭಾಷಣದಲ್ಲಿ ಚಂದ್ರಶೇಖರ್ ರಾವ್ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಕಳೆದ 50 ದಿನಗಳಲ್ಲಿ ಚಂದ್ರಶೇಖರ್ ರಾವ್ ಅವರು 2ನೇ ಬಾರಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇದು ಎರಡು ಪಕ್ಷಗಳ ನಡುವೆ ಉತ್ತಮ ಮೈತ್ರಿ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎನ್ನುವ ರಾಜಕೀಯ ವಿಶ್ಲೇಷಣೆ ಕೇಳಿಬಂದಿದೆ.

ಕರ್ನಾಟಕ ಚುನಾವಣೆಗೂ ಮೊದಲು ಚಂದ್ರಶೇಖರ್ ರಾವ್ ಅವರು ಬೆಂಗಳೂರಿಗೆ ಭೇಟಿ ನೀಡಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಈ ವೇಳೆ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಕೆಸಿಆರ್ ರಾಜ್ಯ ಜೆಡಿಎಸ್ ಬೆಂಬಲದೊಂದಿಗೆ ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ವಿಷಯವನ್ನು ಪ್ರಸ್ತಾಪಿಸಿದ್ದರು. ಈಗಾಗಲೇ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜೊತೆ ಚರ್ಚೆ ನಡೆಸಲಾಗಿದೆ. ದೇಶದ ಪ್ರಮುಖ ನದಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದೆ. ಆದರೆ ರಾಜ್ಯಗಳ ನಡುವೆ ನಿರಂತರವಾಗಿ ನೀರಿಗಾಗಿ ಜಗಳ ನಡೆಯುತ್ತಿದೆ. ಈ ಜಲ ಯುದ್ಧಕ್ಕೆ ಕಾರಣ ಯಾರು? 65 ವರ್ಷ ಕಳೆದರೂ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ನೀರು ಸಿಗುತ್ತಿಲ್ಲ. ಕೇಂದ್ರ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್ ಟ್ರ್ಯಾಪ್ ನಿಂದ ಪ್ರಾದೇಶಿಕ ಪಕ್ಷಗಳನ್ನು ಹೊರತರಬೇಕಿದೆ. ಇದಕ್ಕಾಗಿ ನೂತನ ತೃತೀಯ ರಂಗ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದರು.

ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ. ದೇಶದಲ್ಲಿ ಸಾಕಷ್ಟು ನೀರು ಇದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಸಮರ್ಪಕ ನೀರು ಸಿಗುವಂತೆ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಭಾರತ, ಭಾರತ ಮಾತೆ ಮತ್ತು ಭಾರತೀಯರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ನಮ್ಮ ತೃತೀಯ ರಂಗಕ್ಕೆ ಸೇರಿದರೂ ಆ ಪಕ್ಷಕ್ಕೆ ಸ್ವಾಗತ ಎಂದು ಕೆಸಿಆರ್ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *