ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ: ವೀರೇಂದ್ರ ಸೆಹ್ವಾಗ್

Public TV
2 Min Read

ಬೆಂಗಳೂರು: ನನ್ನ ಮಕ್ಕಳಿಗೆ ಸೌತ್ ಇಂಡಿಯನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಈ ಸಭೆಯ ಮೂಲಕ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೆಚ್ಚು ಖುಷಿ ಕೊಟ್ಟಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಸೀಸನ್ 2 ಹರಾಜು ಪ್ರಕ್ರಿಯೆ ಭಾಗವಾಗಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಸೆಹ್ವಾಗ್ ಕನ್ನಡ ನಟರ ಪ್ರಯತ್ನದ ಕುರಿತು ಮೆಚ್ಚುಗೆ ಸೂಚಿಸಿದರು. ಈ ಹಿಂದೆ ಕೆಸಿಸಿಯಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಏಕೆಂದರೆ ಬಿಸಿಸಿಐನೊಂದಿಗೆ ಒಪ್ಪಂದವಾಗಿದ್ದರಿಂದ ಭಾಗವಹಿಸಿದರೆ ಅಮಾನತು ಮಾಡಲಾಗುತ್ತಿದ್ದು. ಸದ್ಯ ಇಂತಹ ಯಾವುದೇ ತೊಂದರೆಗಳಿಲ್ಲ. ಈ ಬಾರಿ ನಾನು ಸಹ ಸೂಪರ್ ಸ್ಟಾರ್ ಗಳೊಂದಿಗೆ ಆಟವಾಡಲು ಅವಕಾಶ ದೊರೆತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಹಿಂದೆ ಬಾಲಿವುಡ್ ಸ್ಟಾರ್ ಆಟಗಾರರೊಂದಿಗೆ ಪಂದ್ಯವಾಡಿದ್ದ ವೇಳೆ ಜಹೀರ್, ಶ್ರೀನಾಥ್ ಬೌಲಿಂಗ್ ನಲ್ಲಿ ಕೆಲ ಸ್ಟಾರ್ ಆಟಗಾರರು ಬೌನ್ಸರ್ ಎದುರಿಸಲಾಗದೆ ಪೆಟ್ಟು ತಿಂದಿದ್ದರು. ಈ ಭಯವು ಸದ್ಯ ನಿವಾರಣೆಯಾಗಿದ್ದು, ಈ ಲೀಗ್ ನಲ್ಲಿ ಬೌನ್ಸರ್ ಎಸೆಯುವಂತಿಲ್ಲ ಎಂದು ಸುದೀಪ್ ಹೇಳಿದ್ದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ನಟ ಸುದೀಪ್, ಕೆಸಿಸಿ ಮೊದಲ ಸೀಸನ್ ಉತ್ತಮವಾಗಿತ್ತು. ಆದರೆ ಈ ಬಾರಿ ಹೆಚ್ಚಿನ ಮನರಂಜನೆ ನೀಡಬೇಕು. ಆ ಮೂಲಕ ಕೆಸಿಸಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು. ಹೀಗಾಗಿ ಇವರನ್ನೆಲ್ಲಾ ಕರೆದರೆ ಹೇಗೆ ಎಂಬ ಆಲೋಚನೆ ಬಂತು. ಆದರೆ ನನ್ನ ಆಹ್ವಾನ ಕೇಳಿದ ಕೂಡಲೇ ಎಲ್ಲರೂ ಬರಲು ಒಪ್ಪಿಗೆ ನೀಡಿದರು. ಇದು ಅವರ ಗೌರವವನ್ನು ಹೆಚ್ಚಿಸಿದೆ ಎಂದರು.

ಕೆಸಿಸಿ ಆರಂಭ ಮಾಡುವಾಗ ಯಾವುದೇ ಇತಿಹಾಸ ಸೃಷ್ಟಿಸುತ್ತೇನೆ ಎಂದು ಹೊರಟವರು ಇತಿಹಾಸ ಸೃಷ್ಟಿಸಿಲ್ಲ. ನಾನು ಸುಮ್ಮನೆ ಶುರು ಮಾಡಿದೆ. ಸದ್ಯ ಎಲ್ಲವೂ ಸಹ ಹಾಗೆ ನಡೆಯುತ್ತಿದೆ. ಈ ಯಶಸ್ಸಿಗೆ ನಾನೊಬ್ಬನೇ ಕಾರಣ ಅಲ್ಲ. ಇಡೀ ಚಿತ್ರರಂಗದ ಸಹಕಾರ ಇದೆ. ಶಿವಣ್ಣ ಅವರು ತುಂಬಾ ಬೆಂಬಲ ನೀಡಿದ್ದಾರೆ. ಅಲ್ಲದೇ ಪುನೀತ್, ಉಪೇಂದ್ರ, ಯಶ್ ಎಲ್ಲರ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲ್ಶಾನ್ ಸೇರಿದಂತೆ ಹಲವು ಆಟಗಾರರು ಹಾಜರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *