ಹೋದ ಹೋದಲ್ಲೆಲ್ಲಾ ನಿದ್ರೆ ಹೋಗ್ತಾರೆ, ಹೀಗೊಂದು ವಿಚಿತ್ರ ಊರಿನ ರಿಯಲ್ ಕಥೆ!

Public TV
2 Min Read

ಇದು ಕಜಕಿಸ್ತಾನದ ಸುಂದರವಾದ ಪ್ರದೇಶ ಕಲಾಚಿ. ತನ್ನಲ್ಲಿರೋ ನೈಸರ್ಗಿಕ ಸಂಪತ್ತಿನಿಂದ ಹಾಗೂ ಪ್ರಾಕೃತಿಕ ಸೌಂದರ್ಯದಿಂದಾಗಿ ಕಲಾಚಿ ಪ್ರಸಿದ್ಧಿಯನ್ನ ಹೊಂದಿದೆ. ಇಲ್ಲಿ ನೆಲೆಸಿರೋ ಜನ ಕೂಡಾ ಅಷ್ಟೇ ನೆಮ್ಮದಿಯಿಂದ ಜೀವನ ಕಂಡುಕೊಂಡಿದ್ದಾರೆ. ಇಲ್ಲಿಯೇ ಹುಟ್ಟಿ ಬೆಳೆದು ತಮ್ಮ ಹಳ್ಳಿ ತಮ್ಮ ಜನ ಅಂತ ದಿನಗಳನ್ನು ದೂಡ್ತಿದ್ದವರಿಗೆ ಈಗ ಒಂದು ವಿಚಿತ್ರ ಸಮಸ್ಯೆ ಕಾಡೋಕೆ ಶುರುವಾಗಿದೆ. ಅದು ನಿದ್ದೆ.

ನಾವು ನೀವೆಲ್ಲಾ ಬೆಳಗ್ಗೆಯಿಂದ ಸಂಜೆತನಕ ದುಡಿದು ಒಮ್ಮೆ ಮನೆ ಸೇರಿ ನೆಮ್ಮದಿಯಾಗಿ ನಿದ್ರಾದೇವಿಯ ಮಡಿಲು ಸೇರೋ ತವಕದಲ್ಲಿರ್ತೀವಿ. ಆದ್ರೆ, ಕಜಕಿಸ್ತಾನದ ಕಲಾಚಿ ಗ್ರಾಮದವ್ರಿಗೆ ನಿದ್ರಾದೇವಿಯೇ ಶಾಪವಾಗಿ ಪರಿಣಮಿಸಿದ್ದಾಳೆ. ಇವರಿಗೆ ನಿದ್ದೆ ಅಂದ್ರೆ ಬೆಚ್ಚಿಬೀಳೋ ಪರಿಸ್ಥಿತಿ ಉಂಟಾಗಿದ್ಯಂತೆ. ಕೇಳೋಕೆ ವಿಚಿತ್ರ ಅಂತಾ ಅನ್ಸಿದ್ರೂ ಇದು ಖಂಡಿತಾ ನಿಜ.

ಕಲಾಚಿ ಅನ್ನೋ ಈ ಸುಂದರ ಹಳ್ಳಿಯ ಜನರಿಗೆ ನಿದ್ದೆಯ ರೋಗ ಇನ್ನಿಲ್ಲದಂತೆ ಕಾಡ್ತಾ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಇಂತಹಾ ತೊಂದ್ರೆ ಕಾಣಿಸ್ಕೊಳ್ಳೋದಕ್ಕೆ ಶುರುವಾಗಿದೆ. ಇಲ್ಲಿ ನಿದ್ರೆಗೆ ಹೊತ್ತು ಗೊತ್ತಿಲ್ಲ. ಯಾವ್ ಟೈಮಲ್ಲಿ, ಏನೇ ಕೆಲ್ಸ ಮಾಡ್ತಿದ್ರೂ ಸಡನ್ ಆಗಿ ತೂಕಡಿಸೋದಕ್ಕೆ ಶುರುವಾಗುತ್ತೆ. ನೀವು ಒಂದು ಪಕ್ಷ ಕುಂಭಕರ್ಣನನ್ನ ಬೇಕಾದ್ರೂ ಎಬ್ಬಿಸ್ಬೋದೇನೊ. ಆದ್ರೆ, ಇಲ್ಲಿ ಒಮ್ಮೆ ಮಲಗಿದೋರು ಅವ್ರಾಗೇ ಏಳೋವರೆಗೂ ಎಬ್ಬಿಸೋದಕ್ಕೆ ಸಾಧ್ಯಾನೇ ಇಲ್ಲ. ಇಲ್ಲಿ ಕೆಲವರ ನಿದ್ದೆಯಂತೂ ಕೆಲವು ಗಂಟೆಗಳಿಂದ ಹಿಡಿದು ತಿಂಗಳವರೆಗೂ ನಡೆಯುತ್ತೆ.

ಅಂದ್ಹಾಗೆ, ಈ ಕಾಯಿಲೆ ಆರಂಭವಾಗಿರೋದು ಸುಮಾರು 2010ರ ಏಪ್ರಿಲ್ ತಿಂಗಳಲ್ಲಿ. ಮೊದ ಮೊದಲು ಇದನ್ನ ಹಗುರವಾಗಿ ಪರಿಗಣಿಸಿದ ಜನಕ್ಕೆ ಬರ್ತಾ ಬರ್ತಾ ಇದ್ರ ತೀವ್ರತೆ ಅರ್ಥವಾಗ್ತಾಹೋಯ್ತು. ಕೂತಲ್ಲಿ, ನಿಂತಲ್ಲಿ, ಯಾವುದೋ ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋದಲ್ಲಿ, ಸ್ಕೂಲಲ್ಲಿ, ದೇವಸ್ಥಾನದಲ್ಲಿ ಹೀಗೆ ಎಲ್ಲೆಂದ್ರಲ್ಲಿ ಧಡಾರ್ ಅಂತಾ ನಿದ್ರಾ ದೇವಿ ಅಟ್ಯಾಕ್ ಮಾಡಿಬಿಡ್ತಾ ಇದ್ಲು. ಸರಿ ಸುಮಾರು 800 ಜನ ಇರೋ ಈ ಗ್ರಾಮದಲ್ಲಿ 15% ಜನ ಈ ರೋಗಕ್ಕೆ ತುತ್ತಾಗಿರೋದು ನಿಜಕ್ಕೂ ಭಯಹುಟ್ಟಿಸಿಬಿಟ್ಟಿತ್ತು.

ನಿದ್ದೆ ಬರ್ದೇ ಇದ್ರೆ, ಡಾಕ್ಟರ್ ಬಳಿ ಹೋಗೋದನ್ನ ನೋಡಿರ್ತೀವಿ. ಆದ್ರೆ, ಇಲ್ಲಿನ ಜನ ಮಾತ್ರ ತಮಗೆ ನಿದ್ದೆ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ವೈದ್ಯರ ಬಳಿ ಧಾವಿಸೋದಕ್ಕೆ ಶುರು ಮಾಡಿಬಿಟ್ಟಿದ್ರು. ಡಾಕ್ಟರ್ ಕೂಡಾ ಕಾರಣ ಗೊತ್ತಾಗದೆ ಕೈಚೆಲ್ಲಿದಾಗ, ವಿಜ್ಞಾನಿಗಳ ಮೊರೆ ಹೋದ್ರು ಇಲ್ಲಿನ ಜನ. ರಹಸ್ಯವನ್ನು ಹೇಗಾದ್ರೂ ಬೇಧಿಸ್ಲೇಬೇಕು ಅಂತಾ ಡಿಸೈಡ್ ಮಾಡಿದ ವಿಜ್ಞಾನಿಗಳ ತಂಡವೊಂದು ಈ ಕಾಯಿಲೆ ಯಾಕೆ ಹರಡುತ್ತೆ ಅಂತಾ ಕಾರಣ ಹುಡುಕ್ತಾ ಸಾಗಿದ್ರು. ಈ ನಿದ್ರೆಯ ಜಾಡು ಹಿಡಿದವರಿಗೆ ಇಲ್ಲೊಂದು ಮಹತ್ವದ ಸುಳಿವು ಸಿಕ್ಕಿತ್ತು. ಈ ರೋಗಕ್ಕೆ ತುತ್ತಾದವ್ರ ಮೆದುಳಿನಲ್ಲಿ ದ್ರವ ರೂಪದ ಪದಾರ್ಥ ಹೆಚ್ಚಾಗ್ತಾ ಹೋಗ್ತಿತ್ತು. ಆದ್ರೆ, ದ್ರವ ರೂಪದ ಪದಾರ್ಥ ಹೆಚ್ಚಾಗ್ತಿರೋದ್ಯಾಕೆ ಅಂತಾ ನೋಡಿದಾಗ ಅಂತಿಮವಾಗಿ ಸಿಕ್ಕ ಕಾರಣವೇ ಕಲುಷಿತ ನೀರು.

ಕಜಕಿಸ್ಥಾನದ ಕಲಾಚಿ ಅನ್ನೋ ಈ ಗ್ರಾಮದ ಬಳಿ ಹಿಂದೆ ಒಂದು ಯುರೇನಿಯಂ ಗಣಿ ಇತ್ತು. ಆದ್ರೀಗ ಆ ಗಣಿ ಬಂದ್ ಆಗಿದ್ರೂ, ಅದ್ರಿಂದಾಗಿ ವಿಷಕಾರಿ ರೇಡಿಯೇಷನ್ ಉತ್ಪತ್ತಿಯಾಗುತ್ತೆ. ಇದೇ ರೇಡಿಯೇಶನ್ ನಿಂದಾಗಿ ಜನರಿಗೆ ಒಂದು ರೀತಿಯ ಮಂಪರು ಆವರಿಸುತ್ತಿದೆ ಅನ್ನೋದಾಗಿ ವಿಜ್ಞಾನಿಗಳು ಹೇಳ್ತಾರೆ. ಆದ್ರೆ, ಕಾರಣ ಇಂದಿಗೂ ಅಸ್ಪಷ್ಟವಾಗೇ ಉಳಿದಿದೆ. ಇಂದಿಗೂ ಜನ ಇದೇ ಮಂಪರಿನಲ್ಲಿ ದಿನ ದೂಡ್ತಿದ್ದಾರೆ.

ಕ್ಷಮಾ ಭಾರದ್ವಾಜ್, ಉಜಿರೆ

Share This Article
Leave a Comment

Leave a Reply

Your email address will not be published. Required fields are marked *