ಕಥುವಾ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ – 6 ಮಂದಿ ದೋಷಿಗಳು

Public TV
2 Min Read

ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಜಮ್ಮು-ಕಾಶ್ಮೀರದ ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರು ದೋಷಿಗಳು ಎಂದು ಪಂಜಾಬ್‍ನ ಪಠಾಣ್‍ಕೋಟ್ ನ್ಯಾಯಾಲಯವು ತೀರ್ಪು ನೀಡಿದೆ.

ಕಳೆದ ವರ್ಷ ಜೂನ್ ಮೊದಲ ವಾರದಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಆದರೆ ಪ್ರಕರಣದ ಕುರಿತು ವಿಚಾರಣೆಯ ವಿಳಂಬಕ್ಕೆ ಅಸಮಾಧಾನ ಹೊರ ಹಾಕಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಶೀಘ್ರವೇ ಮುಗಿಸಬೇಕು ಆದೇಶ ನೀಡಿ ಪ್ರಕರಣವನ್ನು ಪಠಾಣ್‍ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಸುಪ್ರೀಂ ಕೋರ್ಟ್ ಆದೇಶದನ್ವಯ ವಿಚಾರಣೆ ನಡೆಸಿದ ಪಂಜಾಬಿನ ಪಠಾಣ್ ಕೋಟ್ ನ್ಯಾಯಾಲಯವು, 8 ಜನ ಆರೋಪಿಗಳ ಪಟ್ಟಿಯಲ್ಲಿ 6 ಜನರು ಅಪರಾಧಿಗಳು ಎಂದು ತೀರ್ಪು ನೀಡಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಇಂದು ಮಧ್ಯಾಹ್ನದ ಪ್ರಕಟಿಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

ಅಪರಾಧಿಗಳ ಪಟ್ಟಿಯಲ್ಲಿ ಸಾಂಜಿ ರಾಮ್, ತಿಲಕ್ ರಾಜ್, ಅರವಿಂದ್ ದತ್ತಾ ಪ್ರಮುಖರು. ಈ ಪ್ರಕಣವನ್ನು ಮುಚ್ಚಿ ಹಾಕಲು ಸಹಕರಿಸಿದ್ದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ ವಿರುದ್ಧವು ಆರೋಪ ಸಾಬೀತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಥುವ ಗ್ರಾಮದ ಮುಖಂಡ ಸಂಜಿ ರಾಮ್, ಆತನ ಮಗ ವಿಶಾಲ್, ಗೆಳೆಯರಾದ ಆನಂದ್ ದತ್ತ ಹಾಗೂ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯ, ಸುರೇಂದ್ರ ವರ್ಮ, ಮುಖ್ಯ ಪೇದೆ ತಿಲಕ್ ರಾಜ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಪ್ರಕರಣವನ್ನು ಜೂನ್ 3 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ತೇಜ್‍ವಿಂದರ್ ಸಿಂಗ್ ಜೂನ್ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದರು.

ಏನಿದು ಪ್ರಕರಣ?:
ಸಂಜೀ ರಾಮ್ ಹಾಗೂ ಆತನ ಗುಂಪು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನೆಲೆಸಿದ್ದ ಅಲ್ಪಸಂಖ್ಯಾತ ಅಲೆಮಾರಿಗಳನ್ನು ತೆರುವುಗೊಳಿಸಲು ಷಡ್ಯಂತ್ರ ರೂಪಿಸಿತ್ತು. ಹೀಗಾಗಿ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದಾಗ ಆಕೆಯನ್ನು ಅಪಹರಿಸಿದ್ದರು. ಬಾಲಕಿಯನ್ನು ದೇವಾಲಯದಲ್ಲಿ ಇರಿಸಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

ಬಾಲಕಿ ಅಪಹರಣವಾದ ಮೂರು ದಿನಗಳ ನಂತರ ಆಕೆಯ ಮೃತ ದೇಹ ದೇವಾಲಯದ ಬಳಿ ಪತ್ತೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದಲ್ಲಿ ವಿವಿಧೆಡೆ ಪ್ರತಿಭಟನೆ ನಡೆಸಿ, ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಮಗಳನ್ನು ಕಳೆದುಕೊಂಡ ಪೋಷಕರು, ನಾವು ಜೀವ ಬೆದರಿಕೆ ಎದುರಿಸುತ್ತಿದ್ದೇವೆ. ಇಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದರು.

ಮೃತ ಬಾಲಕಿಯ ಪೋಷಕರ ಮನವಿಗೆ ಸ್ಪಂದಿಸಿದೆ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ 30 ಕಿ.ಮೀ ದೂರ ವಿರುವ ಪಂಜಾಬ್ ಪ್ರಾಂತ್ಯದ ಪಠಾಣ್‍ಕೋಟ್‍ಗೆ ಹಸ್ತಾಂತರಿಸಿತ್ತು. ಅಷ್ಟೇ ಅಲ್ಲದೆ ಪ್ರತಿದಿನ ವಿಡಿಯೋ ಕ್ಯಾಮೆರಾ ಮೂಲಕ ವಿಚಾರಣೆ ನಡೆಸಿ ಶೀಘ್ರದಲ್ಲಿ ತೀರ್ಪು ನೀಡಬೇಕು ಎಂದು ಸೂಚಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *