ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ: ಯೂ ಟರ್ನ್ ಹೊಡೆದ ಪಾಕ್

Public TV
2 Min Read

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಪಾಕಿಸ್ತಾನ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

ಪಾಕ್ ಸಚಿವ ಖುರೇಷಿ ಅವರ ಹೇಳಿಕೆಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯದ ವಿರುದ್ಧವಾಗಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ಸಮುದಾಯ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ಪರಮಾಣು ಯುದ್ಧ ಮಾಡಲಾಗುವುದು. ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಯೂ ಇದೆ ಎಂದು ಇಮ್ರಾನ್ ಖಾನ್ ಬೆದರಿಕೆ ಹಾಕಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಖುರೇಷಿ ಅವರು, ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಹೊಡೆದಿದ್ದಾರೆ. ಇದನ್ನೂ ಓದಿ:  ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಯುದ್ಧ: ಪಾಕ್ ಸಚಿವ

ಸಂದರ್ಶನವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಖುರೇಷಿ ಅವರು, ದಕ್ಷಿಣ ಏಷ್ಯಾದ ಮೇಲೆ ಪರಮಾಣು ನೆರಳು ಸುಳಿದಾಡುತ್ತಿದೆ. ಭಾರತ ಹಾಗೂ ಪಾಕಿಸ್ತಾನವು ಕಾಶ್ಮೀರ ಕುರಿತು ಮಾತುಕತೆ ಪ್ರಾರಂಭಿಸಲು ಶೂನ್ಯ ಮೊತ್ತದ ಮನಸ್ಥಿತಿಯಿಂದ ಹೊರಬರಬೇಕು. ಪಾಕಿಸ್ತಾನ ಯಾವಾಗಲು ಶಾಂತಿಯನ್ನು ಬಯಸುತ್ತದೆ. ಆಕ್ರಮಣಕಾರಿ ನೀತಿಯನ್ನು ಎಂದಿಗೂ ಅನುಸರಿಸಲಿಲ್ಲ ಎಂದು ಹೇಳಿದ್ದಾರೆ.

ಪರಮಾಣು ಬಾಂಬ್ ಹೊಂದಿರುವ ಎರಡು ನೆರೆಯ ದೇಶಗಳು ಯುದ್ಧಕ್ಕೆ ಹೋಗುವ ಭಾರೀ ಅಪಾಯಕ್ಕೆ ಮುಂದಾಗಬಾರದು. ಈ ವಿಚಾರವಾಗಿ ಅನೇಕ ಬಾರಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿಕೆ ನೀಡಿದ್ದಾರೆ. ಅವರ ನೇತೃತ್ವದ ಸರ್ಕಾರವು ಮಾತುಕತೆ ಪ್ರಾರಂಭಿಸಲು ಭಾರತಕ್ಕೆ ಪದೇ ಪದೇ ಅವಕಾಶ ನೀಡುತ್ತಿದೆ ಎಂದು ಖುರೇಷಿ ತಿಳಿಸಿದ್ದಾರೆ. ಇದನ್ನೂ ಓದಿ:  ಭಾರತದೊಂದಿಗೆ ಯುದ್ಧದ ಭವಿಷ್ಯ ನುಡಿದಿದ್ದ ಪಾಕ್ ಸಚಿವನಿಗೆ ವಿದ್ಯುತ್ ಶಾಕ್: ವಿಡಿಯೋ

ಖುರೇಷಿ ಅವರು, ಕಾಶ್ಮೀರ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂಬ ಭಾರತದ ಸಮರ್ಥನೆಯನ್ನು ತಳ್ಳಿಹಾಕಿದ್ದು, ಇದು ಅಂತರಾಷ್ಟ್ರೀಯ ವಿಷಯವಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಾಗಿನಿಂದ ಇಮ್ರಾನ್ ಖಾನ್ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಕಾಶ್ಮೀರದ ಮೇಲಿನ ಭಾರತದ ನಡೆಯನ್ನು ಕಾನೂನುಬಾಹಿರ ಎಂದು ದೂರಿದ್ದಾರೆ. ಇದು ಭಾರತ-ಪಾಕಿಸ್ತಾನ ನಡುವಿನ ಶಿಮ್ಲಾ ಒಪ್ಪಂದದ ಬಗೆಗಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *