ಜೈಶ್ ಸಂಘಟನೆಯ ಬಾಂಬ್ ತಯಾರಕ 19ರ ಉಗ್ರ ಮಟಾಶ್

Public TV
2 Min Read

ಶ್ರೀನಗರ: ಜೈಶ್-ಎ-ಮೊಹಮ್ಮದ್ ಸಂಘಟನೆಯ ಐಇಡಿ ಬಾಂಬ್ ತಯಾರಕ 19 ವರ್ಷದ ಮುನ್ನಾ ಲಾಹೋರಿ ಸೇರಿದಂತೆ ಇಬ್ಬರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಪಾಕಿಸ್ತಾನ ಮೂಲದ ಮುನ್ನಾ ಲಾಹೋರಿ ಐಇಡಿ ಬಾಂಬ್ ಗಳ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದನು. ಜೂನ್ 17ರಂದು ಮುನ್ನಾ ಲಾಹೋರಿ ಐಇಡಿ ಸ್ಫೋಟಗೊಳಿಸಿದ್ದನು.

ಈ ವರ್ಷ ಬಿನಿಹಾಲ್ ಬಳಿಯ ಭದ್ರತಾ ಪಡೆಯ ವಾಹನದ ಮೇಲೆ ನಡೆಸಿದ ದಾಳಿಯಲ್ಲಿಯೂ ಮುನ್ನಾ ಲಾಹೋರಿ ಭಾಗಿಯಾಗಿದ್ದನು. ಇಂದು ಬೆಳಗ್ಗೆ ಶೋಫಿಯಾನ್ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಮುನ್ನಾ ಲಾಹೋರಿ ಸೇರಿದಂತೆ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಭಾರತ ಪ್ರವೇಶಿಸಿದ್ದ ಮುನ್ನಾ ಲಾಹೋರಿ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುತ್ತಿದ್ದನು. ಇಲ್ಲಿಯೇ ಐಇಡಿ ಬಾಂಬ್ ತಯಾರಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದನು.

ಇಂದು ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಶೋಫಿಯಾನ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಶೋಫಿಯಾನ್ ಪಟ್ಟಣಕ್ಕೆ ಒಳಬರುವ ಮತ್ತು ಹೊರ ಹೋಗುವ ವಾಹನಗಳನ್ನು ತಡೆಹಿಡಿಯಲಾಗಿತ್ತು. ಈ ಪ್ರದೇಶದ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಳಿಸಲಾಗಿತ್ತು. ಕಾರ್ಯಾಚರಣೆಯ ವೇಳೆ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಭದ್ರತಾ ಪಡೆ ದಾಳಿ ನಡೆಸಿ ಇಬ್ಬರನ್ನು ಹೊಡೆದುರಳಿಸಿದೆ. ಈ ವೇಳೆ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಜೂನ್ 17ರ ದಾಳಿ:
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ 44 ರಾಷ್ಟ್ರೀಯ ರೈಫಲ್ ಬೆಂಗಾವಲು ಪಡೆಯ ಸಮೀಪ ಮುನ್ನಾ ಲಾಹೋರಿ ತಯಾರಿಸಿದ್ದ ಐಇಡಿ ಸ್ಫೋಟಿಸಲಾಗಿತ್ತು. ಈ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, ಹಲವರು ಗಾಯಗೊಂಡಿದ್ದರು. ಇದೇ ರೀತಿ ಹಲವು ಕಡೆ ಮುನ್ನಾ ಲಾಹೋರಿ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದ ಆತಂಕಕಾರಿ ವಿಷಯ ಹೊರ ಬಂದಿತ್ತು. ಕೂಡಲೇ ಎಚ್ಚೆತ್ತ ಭದ್ರತಾ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುನ್ನಾ ಲಾಹೋರಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿತ್ತು.

ಮುನ್ನಾ ಮತ್ತು ಆತನ ಸಹಚರರು ಪುಲ್ವಾಮಾ ಹಾಗೂ ಶೋಫಿಯಾನ್ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ವಾಸವಾಗಿದ್ದು, ಸ್ಥಳೀಯ ಕಾಶ್ಮೀರಿ ಯುವಕರನ್ನು ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ಈ ಪ್ರದೇಶದಲ್ಲಿ ಕಾಶ್ಮೀರಿ ಯುವಕರಿಗೆ ಶಸ್ತ್ರಾಸ್ತಗಳ ಚಲಾವಣೆ ಮತ್ತು ಸ್ಫೋಟಕ ತಯಾರಿಕೆಯ ತರಬೇತಿಯನ್ನು ನೀಡಲಾಗುತ್ತಿದೆ. ಪುಲ್ವಾಮಾ ಮಾದರಿಯಲ್ಲಿಯೇ ಹಲವು ಭಾಗಗಳಲ್ಲಿ ಸ್ಫೋಟದ ಸಂಚು ರೂಪಿಸಿದ್ದರು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *