ಹೊಸ ಕಾಶಿ ನಿರ್ಮಾಣದ ಹಿಂದೆ ಗೋಕರ್ಣದ ವ್ಯಕ್ತಿ

Public TV
2 Min Read

ಕಾರವಾರ: ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. ಈ ಕಾರಿಡಾರ್ ವಾರಣಾಸಿಯ ಪುರಾತನ ಕಾಶಿ ವಿಶ್ವನಾಥ ದೇವಸ್ಥಾನವನ್ನು ನೇರವಾಗಿ ಗಂಗಾ ಘಾಟ್‍ನೊಂದಿಗೆ ಸಂಪರ್ಕಿಸುತ್ತದೆ. ಸುಮಾರು 800 ಕೋಟಿ ರೂ. ವೆಚ್ಚದ ಯೋಜನೆಯ ಮೂಲಕ 241 ವರ್ಷಗಳ ನಂತರ ಈ ಆಧ್ಯಾತ್ಮಿಕ ಕೇಂದ್ರವು ಹೊಸ ಅವತಾರದಲ್ಲಿ ಗೋಚರಿಸುತ್ತಿದೆ.

ಹೊಸ ಕಾಶಿ ನಿರ್ಮಾಣ ಯೋಜನೆಯ ಹಿಂದಿನ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ನಿತಿನ್ ರಮೇಶ್ ಗೋಕರ್ಣ. ನಿತಿನ್ ಅವರ ಅಜ್ಜ ಮುಂಬೈನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು. ಹಾಗಾಗಿ ಅವರ ಕುಟುಂಬ ಗೋಕರ್ಣದಿಂದ ಮುಂಬೈಗೆ ಸ್ಥಳಾಂತರಗೊಂಡಿತ್ತು. ನಿತಿನ್ ಅವರ ತಂದೆ ಮುಂಬೈನಲ್ಲೇ ಜನಿಸಿ ಅಲ್ಲಿಯೇ ನೆಲೆಸಿದ್ದರು. ನಿತಿನ್ ಅವರೂ ಮುಂಬೈನಲ್ಲಿ ಜನಿಸಿ, ಉನ್ನತ ಶಿಕ್ಷಣ ಪೂರೈಸಿದ ನಂತರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು 1990ರ ಬ್ಯಾಚ್‍ನ ಐಎಎಸ್ ಅಧಿಕಾರಿ. ಕಳೆದ 30 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ನೆಲೆಸಿರುವ ನಿತಿನ್ ಅವರು ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಿಂದೆ ಅವರು ವಾರಣಸಿಯ ಜಿಲ್ಲಾಧಿಕಾರಿಯೂ ಆಗಿದ್ದರು. ಇದನ್ನೂ ಓದಿ: ಕಾಶಿಯಿಂದ ಕಾಶ್ಮೀರದವರೆಗೆ ಅಭಿವೃದ್ಧಿ – ಮೋದಿ ಅವಧಿಯಲ್ಲಿ ಯಾವೆಲ್ಲ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ?

 

ದೂರದ ಊರಿಗೆ ಸ್ಥಳಾಂತರಗೊಂಡರೂ ಅವರ ಕುಟುಂಬ ಗೋಕರ್ಣದೊಂದಿಗೆ ನಂಟು ಹೊಂದಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಗೋಕರ್ಣಕ್ಕೆ ಬರುತ್ತಾರೆ. `ದಕ್ಷಿಣ ಕಾಶಿ’ ಎನಿಸಿಕೊಂಡಿರುವ ಗೋಕರ್ಣ ಮೂಲದವರೇ ಕಾಶಿ ವಿಶ್ವನಾಥ ದೇವಸ್ಥಾದ ಪುನರ್ ನಿರ್ಮಾಣ ಯೋಜನೆಯ ರೂವಾರಿಯಾಗಿರುವುದು ಜಿಲ್ಲೆಯ ಜನರು ಹೆಮ್ಮೆ ಪಡುವ ಸಂಗತಿ.

ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರ ಸ್ವೀಕರಿಸಿದ ನಂತರ ನಿತಿನ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದರು. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡ ಸವಾಲನ್ನು ಎದುರಿಸಿದರು. ನಿತೀನ್ ಅವರು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ನಂತರ ಕಾಶಿಯ ಕಾರಿಡಾರ್ ಯೋಜನೆ ಅವರ ಹೆಗಲೇರಿತು. ಇದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

ವಿಶ್ವದ ಪುರಾತನ ನಗರಗಳಲ್ಲಿ ಒಂದಾಗಿರುವ ಕಾಶಿ ಅನೇಕ ಸಲ ದಾಳಿಗೆ ಒಳಗಾಗಿದೆ. ಅದನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ಸವಾಲಿನಿಂದ ಕೂಡಿತ್ತು. ಹೊಸ ಕಾಶಿ ಹೇಗಿದೆ ಎನ್ನುವುದನ್ನು ಅಲ್ಲಿಗೆ ತೆರಳಿಯೇ ನೋಡಬೇಕು ಎನ್ನುತ್ತಾರೆ ನಿತಿನ್.

Share This Article
Leave a Comment

Leave a Reply

Your email address will not be published. Required fields are marked *