ಗ್ರಾಮದ ಕಷ್ಟ ನಿವಾರಣೆಗಾಗಿ ಬಲೂನು ಹಾರಿಬಿಟ್ಟ ಗ್ರಾಮಸ್ಥರು!

Public TV
1 Min Read

ಕಾರವಾರ: ಇಲ್ಲಿನ ಮಾಜಾಳಿಯ ರಾಮನಾಥ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದ ಒಳಿತಿಗಾಗಿ ದಾಂಡೇಬಾಗದ ಕಡಲತೀರದಲ್ಲಿ ‘ವಾಫರ್ ಬಲೂನ್’ ಅನ್ನು ಆಕಾಶಕ್ಕೆ ಹಾರಿಬಿಡಲಾಯಿತು. ಈ ದೃಶ್ಯವನ್ನು ಜಾತ್ರೆಗೆ ಆಗಮಿಸಿದ್ದ ಭಕ್ತರು ನೋಡಿ ಕಣ್ತುಂಬಿಕೊಂಡರು.

ಪ್ರತಿವರ್ಷ ಕಾರ್ತಿಕ ಮಾಸದ ದ್ವಿತೀಯ ದಿನದಂದು ಮಾಜಾಳಿಯ ರಾಮನಾಥ ದೇವರ ಜಾತ್ರೆ ನಡೆಯುತ್ತದೆ. ಅದರಂತೆ ಈ ಬಾರಿಯೂ ಇಲ್ಲಿನ ರಾಮನಾಥ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ರಾಮನಾಥ ದೇವರ ಮೂರ್ತಿಯನ್ನು ಭಾನುವಾರ ರಾತ್ರಿ ಸಾತೇರಿದೇವಿ ದೇವಸ್ಥಾನಕ್ಕೆ ತರಲಾಯಿತು. ಅಲ್ಲಿಂದ ಸೋಮವಾರ ಬೆಳಗ್ಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಕುಳಾವಿ ಜನರು ಕಟ್ಟಿರುವ ತೋರಣಗಳ ಬಳಿ ತೆರಳಿದ ಪಲ್ಲಕ್ಕಿಗೆ ಜನರು ಆರತಿ ಬೆಳಗಿ, ಹೂವು ಹಣ್ಣು ನೀಡಿ ಪೂಜೆ ಸಲ್ಲಿಸಿದರು.

ಇಂದು ದಾಂಡೇಬಾಗ ಗ್ರಾಮದ ಸಾತೇರಿ ದೇವಸ್ಥಾನ ಹಾಗೂ ರಾಮನಾಥ ದೇವಾಲಯದ ಬಳಿ ಗ್ರಾಮಕ್ಕೆ ಒಳಿತಾಗಲಿ ಎಂದು ಬಲೂನನ್ನು ಹಾರಿಸಲಾಯಿತು. ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಬಲೂನ್ ಹಾರುವಾಗ ಹರಹರ ಮಹಾದೇವ ಎನ್ನುತ್ತಾ ಕೂಗುತ್ತಾ, ಚಪ್ಪಾಳೆ ತಟ್ಟುವ ಮೂಲಕ ಎಲ್ಲರೂ ಈ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಈ ಆಚರಣೆ ಇಂದು ನಿನ್ನೆಯದಲ್ಲ. ತಲೆ- ತಲಾಂತರದಿಂದ ಗ್ರಾಮದಲ್ಲಿ ಪೂರ್ವಜರು ನಡೆಸಿಕೊಂಡು ಬಂದಿದ್ದ ಆಚರಣೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗ್ರಾಮದಲ್ಲಿನ ಕಷ್ಟ, ತೊಂದರೆ, ರೋಗ ಇತ್ಯಾದಿ ಸಂಕಷ್ಟಗಳು ಹೊಗೆಯ ರೂಪದಲ್ಲಿ ಗ್ರಾಮದಿಂದ ಹಾರಿ ಹೋಗಲಿ ಎನ್ನುವ ಉದ್ದೇಶದಿಂದ ಜಾತ್ರೆಯ ಸಂದರ್ಭದಲ್ಲಿ ಈ ರೀತಿ ಬಲೂನ್ ಅನ್ನು ಹಾರಿ ಬಿಡಲಾಗುತ್ತದೆ. ಆಕಾಶಕ್ಕೆ ಹಾರಿಬಿಡುವ ಈ ವಾಫರ್ ಸಾಕಷ್ಟು ಎತ್ತರದಲ್ಲಿ ಗಂಟೆಗಟ್ಟಲೇ ಹಾರಿ ನಂತರ ಸಮುದ್ರದಲ್ಲಿ ಬೀಳುತ್ತದೆ. ಹೀಗೆ ಬಿದ್ದರೆ ಗ್ರಾಮದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *