ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

Public TV
1 Min Read

ಕಾರವಾರ: ಇಡೀ ಭಾರತವೇ ಲಾಕ್‍ಡೌನ್ ಆಗಿದೆ. ಹಲವು ಭಾಗದಲ್ಲಿ ದಿನದ ಮೂಲಭೂತ ಅಗತ್ಯ ವಸ್ತುಗಳೂ ಜನರಿಗೆ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದರೂ ಬೀದಿಯಲ್ಲಿರುವ ಅನಾಥರು, ಕೂಲಿ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಇಂತವರಿಗೆ ಅಲ್ಲಿ ಇಲ್ಲಿ ಸಿಗುವ ನಳದ ನೀರೇ ಹಸಿವು ನೀಗಿಸಿಕೊಳ್ಳಲು ಆಧಾರವಾಗಿದೆ.

ಆದರೆ ಇವರ ಸ್ಥಿತಿಯನ್ನು ಅರಿತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಶ್ರೀಧರ್ ಕುಮಟೇಕರ್ ಅವರು ಬೀದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಕಳೆದ ಒಂದು ವಾರದಿಂದ ತಮ್ಮ ಸ್ವಂತ ಹಣ ಖರ್ಚು ಮಾಡಿ ಮೂರು ಹೊತ್ತು ಊಟ, ತಿಂಡಿಗಳನ್ನು ನೀಡುತ್ತಾ ಹಸಿದವರಿಗೆ ನೆರವಾಗುತ್ತಿದ್ದಾರೆ.

ಕುಮಟಾ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಲಾಕ್‍ಡೌಕ್ ಘೋಷಿಸಿದ ನಂತರ ಮನೆಯಲ್ಲಿದ್ದರು. ಆದರೆ ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ಭಿಕ್ಷುಕರನ್ನು, ನಿರ್ಗತಿಕರನ್ನು ನೋಡಿ ತಮ್ಮ ಮನೆಯಲ್ಲಿಯೇ ಪ್ರತಿ ದಿನ ಊಟ, ತಿಂಡಿಯನ್ನು ತಯಾರಿಸಿ ನೀಡುತ್ತಿದ್ದಾರೆ. ಇವರ ಈ ಕೆಲಸವನ್ನು ನೋಡಿದ ಸ್ಥಳೀಯ ಪತ್ರಕರ್ತರು ಸಹ ಸಾಥ್ ನೀಡಿದ್ದು, ಒಂದಿಷ್ಟು ದಿನಸಿ, ಅಗತ್ಯ ವಸ್ತುಗಳನ್ನು ಕೊಡಿಸಿ ಇವರ ಕೆಲಸಕ್ಕೆ ಸಹಕರಿಸುತ್ತಿದ್ದಾರೆ.

ಪ್ರತಿ ದಿನ ಆಹಾರವನ್ನು ತಯಾರಿಸಿ ಬಸ್ ನಿಲ್ದಾಣ, ರಸ್ತೆಗಳಲ್ಲಿರುವ ಅನಾಥರಿಗೆ, ಕೂಲಿ ಕೆಲಸದವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದು ಶ್ರೀಧರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *