ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

Public TV
2 Min Read

ಕಾರವಾರ: ನಗರದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ, ದೊಡ್ಡ ದೊಡ್ಡ ಸದ್ದುಗಳು. ಭೂಕಂಪವೇ ಆಯಿತೇನೋ ಎನ್ನುವಂತೆ ಮನೆಗಳು ಕಂಪಿಸುತ್ತಿವೆ. ಆರೇ ಏನಾಯಿತು ಎಂದು ಜನರು ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಎಲ್ಲವೂ ಶಾಂತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಕಾರವಾರ ನಗರದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವರು ಪೊಲೀಸರಿಗೆ ಸಹ ಕರೆ ಮಾಡಿ ಭೂಕಂಪವಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಯಾವ ಸದ್ದು? ಭೂಕಂಪನವೇ ಅಥವಾ ಇನ್ನೇನೋ ಆಗಿರಬಹುದೇ ಎಂಬ ಅನುಮಾನಗಳು ಜನರಲ್ಲಿ ಭಯ ಹುಟ್ಟಿಸಿತ್ತು.

ಭೂಮಿ ಕಂಪಿಸಿದ್ದು ಹೇಗೆ?
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ನೌಕಾದಳದ ಹಡಗು ನಿಲ್ದಾಣ ಹಾಗೂ ಸಬ್‍ಮೆರಿನ್ ಗಳ ನಿಲ್ದಾಣಕ್ಕಾಗಿ ಅರಗಾ ಬಳಿ ಸಮುದ್ರ ತೀರದಲ್ಲಿ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದೆ. ಸುರಂಗಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಕಲ್ಲನ್ನು ತೆರವುಗೊಳಿಸಲು ದೊಡ್ಡ ಮಟ್ಟದ ಸ್ಫೋಟವನ್ನು ಮಾಡುತ್ತಿದೆ.

ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಕೋಲ ಭಾಗದಿಂದ ಕಾರವಾರ ಹಾಗೂ ಗೋವಾ ಗಡಿಯಲ್ಲೂ ಭೂಮಿ ಕಂಪಿಸಿದೆ. ಇಂದು ಕೂಡ ಸ್ಫೋಟ ನಡೆಸಿದ್ದು ಅರಗಾ ದಿಂದ ಕಾರವಾರದ ಬಳಿ ದಟ್ಟ ಮಣ್ಣು ಮಿಶ್ರಿತ ಹೊಗೆಯ ಆವರಿಸಿದ್ದು ಮತ್ತೊಮ್ಮೆ ಜನರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಕಾರವಾರದ ಸುತ್ತಮುತ್ತ ಪ್ರಾಚೀನ ಕಾಲದ ಏಕ ಶಿಲೆಗಳಿದ್ದು ಇವು ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಸ್ಫೋಟಿಸಿ ರಸ್ತೆ ಅಗಲೀಕರಣ ಮಾಡಲಾಗಿತ್ತು. ಆದರೆ ಈಗ ನೌಕಾದಳ ಕೂಡ ತನ್ನ ನೆಲೆಯನ್ನು ವಿಸ್ತರಿಸುವ ಕಾಮಗಾರಿ ಪ್ರಾರಂಭಿಸಿದೆ.

ನೌಕನೆಲೆ ಸ್ಫೋಟ ನಡೆಸಲು ಅನುಮತಿ ಸಹ ಪಡೆದಿದ್ದು ಮುಂಜಾನೆ ವೇಳೆಯಲ್ಲಿ ಮಾತ್ರ ಸ್ಫೋಟಿಸಲು ಹಾಗೂ ಲಘು ಸಿಡಿತಲೆ ಮಾಡುವಂತೆ ಷರತ್ತುಬದ್ಧ ಮಂಜೂರು ನೀಡಲಾಗಿತ್ತು. ಆದರೆ ಗುತ್ತಿಗೆ ಕಂಪನಿ ಕಾಮಗಾರಿಗೆ ಚುರುಕು ನೀಡುವ ನೆಪದಲ್ಲಿ ಅತೀ ಹೆಚ್ಚು ಸಾಂದ್ರತೆಯುಳ್ಳ ಸಿಡಿತಲೆ ಬಳಸಿ ಸುರಂಗ ಮಾರ್ಗದಲ್ಲಿ ಸ್ಫೋಟ ನಡೆಸುತ್ತಿದೆ. ಇದರಿಂದಾಗಿ ಕಾರವಾರ, ಅಂಕೋಲ ಹಾಗೂ ಗೋವಾ ಗಡಿ ಭಾಗದಲ್ಲಿಯೂ ಕಂಪನದ ಅನುಭವ ಆಗುತಿದ್ದು ಜನರು ಭಯ ಪಡುವಂತೆ ಮಾಡಿದೆ.

ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಮತ್ತೆ ದೊಡ್ಡ ಸ್ಫೋಟವನ್ನು ಬಳಸಿ ಸುರಂಗ ನಿರ್ಮಾಣ ಮಾಡಿದರೆ ಕಾರವಾರ ನಗರದ ಹಲವು ಮನೆಗಳು ಬಿರುಕು ಬಿಡುವ ಸಾಧ್ಯತೆಗಳಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಕಾರವಾರ ನಗರದ ಜನತೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *