ಮೀನುಗಾರರ ಬಲೆಗೆ ಬಿತ್ತು ಚಪ್ಪಲಿ ಮೀನು – ಅಪರೂಪದ ಈ ಮೀನಿನ ವಿಶೇಷವೇನು ಗೊತ್ತಾ?

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರರು ಮತ್ಸ್ಯ ಕ್ಷಾಮದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈ ಬಾರಿ ಅಪರೂಪದ ಮೀನುಗಳು ಮೀನುಗಾರರ ಬಲೆಗೆ ಬೀಳುವ ಮೂಲಕ ಮೀನುಗಾರರು ಆಶ್ಚರ್ಯ ಪಡುವಂತೆ ಮಾಡಿದೆ.

ಹೌದು. ಕಾರವಾರದ ಬೈತಕೋಲಿನ ಬಂದರಿನಲ್ಲಿ ಅಪರೂಪದ ಮೀನುಗಳು ಸಿಗತೊಡಗಿದೆ. ಇವುಗಳಲ್ಲಿ ಸ್ಥಳೀಯವಾಗಿ ಚಪ್ಪಲಿ ಮೀನು, `ಇಚ್ಚ್ ಮೀನು’ ಎಂದು ಕರೆಯುವ ಮೀನೊಂದು ಬೈತಖೋಲ್ ಮೀನುಗಾರಿಕೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಬೋಟ್‍ನ ಬಲೆಗೆ ಬಿದ್ದಿದೆ. ಈ ಮೀನಿನ ವೈಜ್ಞಾನಿಕ ಹೆಸರು ‘ಎಚನೀಸ್ ನೌಕ್ರೆಟಸ್’. ಇವು ಹೆಚ್ಚಾಗಿ ಆಳ ಸಮುದ್ರದಲ್ಲಿ ಅಂದರೆ ಸುಮಾರು 100 ರಿಂದ 150 ಅಡಿ ಆಳದಲ್ಲಿ ಕಂಡುಬರುತ್ತವೆ.

ಈ ಮೀನು ತನ್ನ ತಲೆಯ ಮೇಲೆ ಚಪ್ಪಲಿ ಆಕಾರದಲ್ಲಿ ಹರಿತವಾದ ಡಿಸ್ಕ್ ಸಹಾಯದಿಂದ ದೊಡ್ಡ ಮೀನುಗಳ ಮೇಲೆ ದಾಳಿ ಮಾಡುತ್ತದೆ. ಡಿಸ್ಕ್ ನೆರವಿನಿಂದ ದೊಡ್ಡ ಮೀನುಗಳನ್ನು ಇದು ಗಟ್ಟಿಯಾಗಿ ಹಿಡಿದುಕೊಂಡು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುವುದು ಇದರ ವಿಶೇಷಗಳಲ್ಲಿ ಒಂದಾಗಿದ್ದು, ಕೆಲವೊಮ್ಮೆ ಸ್ಕೂಬಾ ಡೈವರ್ಸ್ ಗಳ ಮೇಲೂ ಈ ಮೀನು ದಾಳಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.

ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳಲ್ಲಿ ಹಾಗೂ ಆಸ್ಟ್ರೇಲಿಯಾದ ಕಡಲಲ್ಲಿ ಹೆಚ್ಚು ಕಂಡುಬರುತ್ತವೆ. ಕರ್ನಾಟಕದ ಕರಾವಳಿಯಲ್ಲಿ ಅಪರೂಪ ಎಂದು ಹೇಳುವ ಈ ಮೀನು ಈ ಬಾರಿ ಸಮುದ್ರದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಕರ್ನಾಟಕದ ಕರಾವಳಿ ಭಾಗಕ್ಕೆ ಈ ಮೀನಿನ ಹಲವು ಗುಂಪುಗಳು ವಲಸೆ ಬಂದಿವೆ. ಹೀಗಾಗಿ ಇಲ್ಲಿನ ಮೀನುಗಾರರ ಬಲೆಗೆ ಬೀಳುತ್ತಿದೆ. ಈ ಮೀನು ಅಪರೂಪವಾದ್ದರಿಂದ ಇವುಗಳಿಗೆ ಮಾರುಕಟ್ಟೆ ಸಹ ಇಲ್ಲ. ಹೀಗಾಗಿ ಇವುಗಳು ಸಿಕ್ಕರೂ ಮೀನುಗಾರರಿಗೆ ಮಾತ್ರ ಲಾಭದ ಮೀನಾಗಿಲ್ಲ. ಆದರೆ ಅರಬ್ಬಿ ಸಮುದ್ರದಲ್ಲಿ ಆಗುತ್ತಿರುವ ಬದಲಾವಣೆಗೆ ಕರ್ನಾಟಕ ಕರಾವಳಿಯ ಭಾಗದಲ್ಲಿ ಅಪರೂಪದ ಮೀನುಗಳು ಪತ್ತೆಯಾಗುತ್ತಿದ್ದು ಮೀನುಗಾರರನ್ನೇ ವಿಸ್ಮಯ ಮೂಡಿಸುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *