ಕಾರವಾರ ಜಿಲ್ಲಾಡಳಿತದಿಂದ ಎಡವಟ್ಟು – 10 ಸಾವಿರ ರೂ. ಅಕೌಂಟಿಗೆ ಹಾಕಿ ವಾಪಸ್ ಕಿತ್ಕೊಂಡ್ರು

Public TV
2 Min Read

ಕಾರವಾರ: ಮಳೆ ಪ್ರವಾಹದಿಂದ ಸರ್ಕಾರ ಸಂತ್ರಸ್ತರಿಗೆ ಮೊದಲ ಚೇತರಿಕೆ ಪರಿಹಾರವಾಗಿ 10 ಸಾವಿರ ವಾರುಸುದಾರರ ಅಕೌಂಟ್ ಗೆ ಹಣ ಹಾಕುತ್ತಿದೆ. ಆದರೆ ಹಾಕಿದ ಹಣವನ್ನೇ ಮರಳಿ ಪಡೆಯುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಎಡವಟ್ಟು ಮಾಡಿದೆ.

ಕಾರವಾರ ತಾಲೂಕು ಆಡಳಿತದ ಅಧಿಕಾರಿಗಳು ಪ್ರವಾಹದಿಂದ ಹಾನಿಯಾದವರಿಗೆ ಪರಿಹಾರವನ್ನು ನೀಡಿ ಮತ್ತೆ ವಾಪಾಸ್ ಪಡೆಯುವ ಮೂಲಕ ಎಡವಟ್ಟನ್ನು ಮಾಡಿದ್ದಾರೆ. ಕಳೆದ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಕಾಳಿ ನದಿಗೆ ಅಪಾರ ನೀರು ಹರಿದು ಬಂದಿತ್ತು. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರನ್ನ ಹೊರಕ್ಕೆ ಬಿಡಲಾಗಿತ್ತು. ಇದರಿಂದಾಗಿ ಕಾರವಾರ ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿದ್ದವು.

ಕದ್ರಾ ಜಲಾಶಯ ಸಮೀಪದಲ್ಲೇ ಇದ್ದ ಕೂರ್ನಿಪೇಟೆ ಎನ್ನುವ ಊರು ಸಂಪೂರ್ಣ ಮುಳುಗಡೆಯಾಗಿ ಗ್ರಾಮದಲ್ಲಿದ್ದ ಸುಮಾರು 21 ಅಂಗಡಿಗಳಿಗೆ ನೀರು ನುಗ್ಗಿ ಎಲ್ಲಾ ವಸ್ತುಗಳು ನೀರು ಪಾಲಾಗಿದ್ದವು. ಪ್ರವಾಹ ಪರಿಸ್ಥಿತಿ ಕಡಿಮೆಯಾದ ನಂತರ ತಾಲೂಕು ಆಡಳಿತದ ಅಧಿಕಾರಿಗಳು ಆಗಮಿಸಿ ಹಾನಿಯಾದ ಅಂಗಡಿಯವರಿಂದ ಮಾಹಿತಿಯನ್ನು ಪಡೆದು 21 ಅಂಗಡಿಯವರಿಗೆ ತಲಾ 10 ಸಾವಿರ ಎಂಬಂತೆ 2 ಲಕ್ಷ ಹಣವನ್ನು ನೀಡಿದ್ದರು. ಆದರೆ ಹಣ ನೀಡಿ ಒಂದು ವಾರದೊಳಗೆ ನಿಮಗೆ ಹಣ ಕೊಡಲು ಆಗುವುದಿಲ್ಲ ಎಂದು ಬ್ಯಾಂಕಿಗೆ ಪತ್ರವನ್ನು ಪಡೆದು ಹಾನಿಗೊಳಗಾದವರ ಖಾತೆಯಿಂದ10 ಸಾವಿರ ರೂ. ವಾಪಾಸ್ ಪಡೆದಿದ್ದಾರೆ. ತಾಲೂಕು ಆಡಳಿತದ ಈ ಎಡವಟ್ಟಿಗೆ ಇದೀಗ ಹಾನಿಗೊಳಗಾದ ಅಂಗಡಿ ಮಾಲೀಕರು ಆಕ್ರೋಶ  ಹೊರಹಾಕಿದ್ದಾರೆ.

ಅಂಗಡಿಯವರ ಬಳಿ ಮಾಹಿತಿಯನ್ನು ಪಡೆದು ಅವರ ಸಿಂಡಿಕೇಟ್ ಬ್ಯಾಂಕಿನ ಖಾತೆಗಳಿಗೆ ಮೊದಲು ಹತ್ತು ಸಾವಿರ ಎಂಬಂತೆ ಹಣವನ್ನು ಪರಿಹಾರವಾಗಿ ತಾಲೂಕು ಆಡಳಿತದ ಅಧಿಕಾರಿಗಳು ನೀಡಿದ್ದರು. ಆದರೆ ಇದೀಗ ಯಾವ ಅಂಗಡಿ ಮಾಲೀಕರಿಗೂ ಮಾಹಿತಿ ನೀಡದೆ ಹಣವನ್ನು ಬ್ಯಾಂಕಿನ ಮೂಲಕವೇ ವಾಪಾಸ್ ಪಡೆದಿದ್ದು ನಮಗೆ ಹಣ ಕೊಡುವುದಾದರು ಯಾಕೆ, ವಾಪಾಸ್ ಪಡೆಯುವುದಾದರು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಾರವಾರ ತಹಶೀಲ್ದಾರ್ ಬಳಿ ಕೇಳಿದ್ರೆ ಪರಿಹಾರ ಹಣವನ್ನು ನಾವು ಮನೆಗಳಿಗೆ ಹಾನಿ ಹಾಗೂ ಬೆಳೆ ಹಾನಿಯಾದವರಿಗೆ ಮಾತ್ರ ಕೊಡಲು ಸಾಧ್ಯ. ನಮಗೆ ತಿಳಿಯದೇ ಅಂಗಡಿಯವರಿಗೆ ಕೊಟ್ಟಿದ್ದೆವು. ಇದೀಗ ಹಣವನ್ನು ಇದೇ ಕಾರಣಕ್ಕೆ ವಾಪಾಸ್ ಪಡೆದಿದ್ದೇವೆ. ಅಂಗಡಿಯವರಿಗೆ ಹಾನಿಯಾಗಿದ್ದರೆ ಅವರಿಗೆ ಸರ್ಕಾರವೇ ಗಮನಹರಿಸಿ ಪರಿಹಾರ ಕೊಡಲು ತೀರ್ಮಾನಿಸಬೇಕು ಎಂದು ಹೇಳುತ್ತಿದ್ದಾರೆ.

ಜಲಾಶಯದಿಂದ ನೀರು ಏಕಾಏಕಿ ಬಿಟ್ಟ ಹಿನ್ನಲೆಯಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ನಾವು ಬಡವರಾಗಿದ್ದು ಅಂಗಡಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೆವು. ಅಂಗಡಿಗೆ ಆದ ಹಾನಿಗೆ ನಿರ್ಲಕ್ಷ ಮಾಡದೇ ಪರಿಹಾರ ಕೊಡಲಿ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *