ಗೋವಾದಿಂದ ಕಂಟೈನರ್‌ನಲ್ಲಿ ಮದ್ಯ ಸಾಗಾಟ- ಅಬಕಾರಿ ಪೊಲೀಸರಿಂದ ವಶ

Public TV
2 Min Read

ಕಾರವಾರ: ಕಂಟೈನರ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಮೀನು ಸಾಗಾಣಿಕೆಯ ಕಂಟೈನರ್ (ನೋಂ.ಸಂ: AP 37 TD 6789) ನಲ್ಲಿ 45 ಲೀ. ಗೋವಾ ಮದ್ಯ ಹಾಗೂ 36 ಲೀ. ಬಿಯರ್ ಅನ್ನು ಸಾಗಿಸಲಾಗುತ್ತಿತ್ತು. ಲಾಕ್ ಡೌನ್ ಇರುವುದರಿಂದ ಮಾಜಾಳಿಯ ಗಡಿಯಲ್ಲಿ ವಾಹನವನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಗೋವಾ ಮದ್ಯ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ತಕ್ಷಣ ಕಂಟೈನರ್ ಅನ್ನು ವಶಕ್ಕೆ ಪಡೆದ ಅಬಕಾರಿ ಸಿಬ್ಬಂದಿ, ಆರೋಪಿ ವಿ.ಪರಶುರಾಮಣ್ಣ ಎಂಬವನನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ 50 ಸಾವಿರ ರೂ.ಗಳಾಗಿದ್ದು, ಕಂಟೈನರ್ ಮೌಲ್ಯ 20 ಲಕ್ಷದ್ದಾಗಿದೆ.

ಮಂಗಳೂರು ಉಪವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ.ಆರ್ ಮೋಹನ್ ಅವರ ಮಾರ್ಗದರ್ಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕಿ ಸುವರ್ಣ ನಾಯಕ ಅವರ ನೇತೃತ್ವದಲ್ಲಿ, ಮಾಜಾಳಿ ಚೆಕ್ ಪೋಸ್ಟ್‍ನ ಅಬಕಾರಿ ಉಪನಿರೀಕ್ಷಕ ಆರ್.ಎನ್ ನಾಯಕ, ಅಬಕಾರಿ ರಕ್ಷಕರಾದ ಯು.ಕೆ ಗೌಡ ವಿಶಾಲ್ ನಾಯಕ್, ಹೇಮಚಂದ್ರ ಈರಣ್ಣನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಂಟೈನರ್ ಬಿಟ್ಟಿದ್ದು ಯಾಕೆ?:
ಕಾರವಾರವು ಗೋವಾ- ಕರ್ನಾಟಕದ ಗಡಿ ತಾಲೂಕಾಗಿದೆ. ಎರಡೂ ರಾಜ್ಯದ ಗಡಿಗಳಲ್ಲಿ ಚೆಕ್ ಪೋಸ್ಟ್‍ಗಳಿವೆ. ಕಾರವಾರದ ಮಾಜಾಳಿಯಲ್ಲಿ ಕರ್ನಾಟಕ ಹಾಗೂ ಗೋವಾದ ಪೊಳೆಮ್ ನಲ್ಲಿ ಅವರ ಚೆಕ್ ಪೋಸ್ಟ್ ಇದೆ. ಎರಡೂ ಚೆಕ್ ಪೋಸ್ಟ್ ಸುಮಾರು 200 ಮೀ. ಅಂತರದಲ್ಲಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡೂ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಯುತ್ತಿದೆ. ಆದರೆ, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಂಟೈನರ್ ಅನ್ನು ಗೋವಾ ಚೆಕ್ ಪೋಸ್ಟ್ ಸಿಬ್ಬಂದಿ ಬಿಟ್ಟು ಕಳುಹಿಸಿದ್ದಾರೆ.

ಗೋವಾ ದಿಂದ ಕರಾವಳಿ ಭಾಗಕ್ಕೆ ಮೀನುಗಳು ಸರಬರಾಜಾಗುತ್ತಿದೆ. ಆದರೂ ಎಲ್ಲವನ್ನು ಚೆಕ್ ಮಾಡಿ ಗಡಿಯೊಳಗೆ ಬಿಡಲಾಗುತ್ತದೆ. ಆದರೆ ಇಷ್ಟು ದೊಡ್ಡ ಕಂಟೈನರ್ ನಲ್ಲಿ ಬಾಕ್ಸ್ ಗಟ್ಟಲೆ ಮದ್ಯ ಸಾಗಾಟವಾದರೂ ಗೋವಾ ಚೆಕ್ ಪೋಸ್ಟ್ ಸಿಬ್ಬಂದಿ ಮೌನ ವಹಿಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಚಿನ್ನದ ಬೆಲೆ:
ಲಾಕ್ ಡೌನ್ ನಿಂದಾಗಿ ಎಲ್ಲೆಡೆ ಮದ್ಯದಂಗಡಿಗಳು ಮುಚ್ಚಿವೆ. ಹೀಗಾಗಿ ಇದೀಗ ಮದ್ಯಕ್ಕೆ ಚಿನ್ನದ ಬೆಲೆ ಬಂದಿದೆ. 100 ರೂ.ಗಳಿದ್ದ ಚಿಕ್ಕ ಬಾಟಲಿಗೆ ಈಗ ಸಾವಿರ ರೂಪಾಯಿ ಅಂತಂದರೂ ಖರೀದಿಸುವವರಿದ್ದಾರೆ. ಹೀಗಾಗಿ ಅಕ್ರಮವಾಗಿ ಗೋವಾದಿಂದ ಕಡಿಮೆ ದರಕ್ಕೆ ಮದ್ಯ ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *