ಕೋಲಾರ ಚಿನ್ನದ ಗಣಿಗೆ ಇಳಿದಿದ್ರು ಕರುಣಾನಿಧಿ

Public TV
1 Min Read

ಕೋಲಾರ: ಕರ್ನಾಟಕದಲ್ಲಿಯೂ ಡಿಎಂಕೆ ಪಕ್ಷದ ಅಸ್ತಿತ್ವ ಸಾಧಿಸುವ ಉದ್ದೇಶವನ್ನು ಕರುಣಾನಿಧಿ ಹೊಂದಿದ್ದರು. ಹೀಗಾಗಿ ಜಿಲ್ಲೆಯ ಕೆಜಿಎಫ್‍ಗೆ ಮೂರು ಬಾರಿ ಭೇಟಿ ನೀಡಿದ್ದರಂತೆ.

ಜಿಲ್ಲೆಯಲ್ಲಿ ಡಿಎಂಕೆ ಬೆಳವಣಿಗೆ ಉದ್ದೇಶದಿಂದ ಕೆಜಿಎಫ್‍ನ ಪಕ್ಷ ಮುಖಂಡರು ಕರುಣಾನಿಧಿ ಅವರಿಗೆ ಆಮಂತ್ರಣ ನೀಡುತ್ತಿದ್ದರಂತೆ. ಹೀಗಾಗಿ ಅವರು 1954 ಜುಲೈ 6ರಂದು ಕಾರ್ಯಕರ್ತರ ಸಭೆ ಹಾಗೂ 1972ರ ಅಕ್ಟೋಬರ್ 4ರಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಪಕ್ಷಕ್ಕೆ ಬೆಂಬಲ ನೀಡುವಂತೆ ಜಿಲ್ಲೆಯ ತಮಿಳು ಭಾಷಿಗರ ಮನವೊಲಿಸಿದ್ದರು.

1972ರಲ್ಲಿ ಹೆನ್ರೀಸ್ ಬಳಿಯ ಚಿನ್ನದ ಗಣಿಗೆ ಭೇಟಿ ನೀಡಿ, ಕೆಳಗೆ ಇಳಿದಿದ್ದರು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೊತೆಗೆ ಮಾತನಾಡಿ, ಕಾರ್ಮಿಕರೊಬ್ಬರ ಟೋಪಿ ಕೇಳಿ ಪಡೆದು, ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಜೊತೆಗೆ ಅಂದು ರಾಬರ್ಟ್ ಸನ್ ಪೇಟೆಯ ಕೃಷ್ಣ ಭವನ್ ವಸತಿ ಗೃಹದಲ್ಲಿ ತಂಗಿದ್ದರೆಂಬ ಮಾಹಿತಿಯಿದೆ.

1984ರಲ್ಲಿ ರಾಬರ್ಟ್ ಸನ್ ಪೇಟೆಯಲ್ಲಿ ನಡೆದ ಡಿಎಂಕೆ ಸಮಾವೇಶದಲ್ಲಿ ಮತ್ತೊಮ್ಮೆ ಭಾಗವಹಿಸಿದ್ದರು. ಅಂದು ಅಭಿಮಾನಿಗಳು ಬೈಕ್ ಜಾಥಾದ ಮೂಲಕ ಬೇತಮಂಗಲದಿಂದ ಕಾರ್ಯಕ್ರಮ ವೇದಿಕೆಗೆ ಕರೆ ತಂದಿದ್ದರು. ಸಮಾವೇಶದಲ್ಲಿ ಮಾತನಾಡಿದ ಕರುಣಾನಿಧಿ ಅವರು, ನಿಮ್ಮನ್ನು ನೀವು ಈ ಮಣ್ಣಿಗೆ ತಕ್ಕಂತೆ ಬದಲಾಯಿಸಿಕೊಳ್ಳಿ. ಮಾತೃ ಭಾಷೆ ತಮಿಳು ಆಗಿದ್ದರೂ ಅದು ನಿಮ್ಮ ಮನದಲ್ಲಿ ಇರಲಿ ಎಂದು ಹೇಳಿ ತಮಿಳು ಭಾಷಿಕರ ಮನ ಗೆದ್ದಿದ್ದರು ಎಂದು ವರದಿಯಾಗಿದೆ.

ತಮಿಳುನಾಡಿಗೆ ಸಮೀಪವಿರುವ ಕೆಜಿಎಫ್‍ನಲ್ಲಿ ಈಗಲೂ ಎಂ.ಜಿ.ರಾಮಚಂದ್ರನ್ ಹಾಗೂ ಕರುಣಾನಿಧಿ ಅಪಾರ ಬೆಂಬಲಿಗರು ಇದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *